‘ಮರ್ಯಾದೆ ಹತ್ಯೆ’ ಪದ ನಿಷೇಧಿಸಿ: ಕಾಂಚಾ ಐಲಯ್ಯ

Update: 2018-09-20 15:42 GMT

ಹೊಸದಿಲ್ಲಿ, ಸೆ. 20: ಮೇಲ್ಜಾತಿಯವರನ್ನು ವಿವಾಹವಾದುದಕ್ಕೆ ದಲಿತ ಅಥವಾ ಕೆಳ ಜಾತಿಯ ವ್ಯಕ್ತಿಗಳನ್ನು ಹತ್ಯೆಗೈಯುತ್ತಿರುವುದಕ್ಕೆ ‘ಮಾರ್ಯಾದೆ ಹತ್ಯೆ’ ಎಂಬ ಪದ ಬಳಸುವುದನ್ನು ನಿಷೇಧಿಸಬೇಕು ಎಂದು ಮಾನವ ಹಕ್ಕು ಹೋರಾಟಗಾರ ಹಾಗೂ ಲೇಖಕ ಕಾಂಚಾ ಐಲಯ್ಯ ಆಗ್ರಹಿಸಿದ್ದಾರೆ.

 ದಲಿತರ ಹತ್ಯೆ ದ್ವೇಷದ ಹತ್ಯೆ ಎಂದು ಹೇಳಿದ ಅವರು, ಮರ್ಯಾದೆ ಹತ್ಯೆ ಎಲ್ಲಿದೆ ?, ಜಾತಿ ಮೂಲದ ಹತ್ಯೆಗೆ ಮರ್ಯಾದೆ ಹತ್ಯೆ ಎಂಬ ಹಣೆಪಟ್ಟಿಯನ್ನು ಯಾಕೆ ಹಚ್ಚಲಾಗುತ್ತದೆ ?, ದಲಿತರು ಅವರ ಜಾತಿಯ ಕಾರಣಕ್ಕಾಗಿ ಹತ್ಯೆಯಾಗುತ್ತಿದ್ದಾರೆ. ಆದುದರಿಂದ ಈ ಜಾತಿ ದ್ವೇಷದ ಹತ್ಯೆ ಎಂದೇ ಕರೆಯಬೇಕು ಎಂದು ಅವರು ಹೇಳಿದ್ದಾರೆ. ಜಾತಿ ಮೂಲದ ತಾರತಮ್ಯ ಹಾಗೂ ಹತ್ಯೆ ತೆಲಂಗಾಣದಲ್ಲಿ ಚುನಾವಣಾ ವಿಷಯ ಆಗುತ್ತಿದೆ ಎಂದು ಐಲಯ್ಯ ಹೇಳಿದರು.

ಮೇಲ್ಜಾತಿಯ ಯುವತಿಯನ್ನು ವಿವಾಹವಾದ ಕಾರಣಕ್ಕೆ ತೆಲಂಗಾಣದ ನಲ್ಗೊಂಡಾ ಜಿಲ್ಲೆಯ ಮಿರ್ಯಾಲಗುಡಾದಲ್ಲಿ ಹತ್ಯೆಗೀಡಾದ ದಲಿತ ಯುವಕ ಪಿ. ಪ್ರಣಯ್ ಕುಮಾರ್ ಕುಟುಂಬವನ್ನು ಅವರು ಭೇಟಿಯಾದರು. ಪ್ರಣಯ್ ಅವರ ಕುಟುಂಬ ಹಾಗೂ ಅವರ ಪತ್ನಿ ಅಮೃತವರ್ಷಿಣಿ ಅವರನ್ನು ಸಮಾಧಾನಪಡಿಸಲು ಮಿರ್ಯಾಲಗುಡಾದಲ್ಲಿರುವ ಪ್ರಣಯ್ ಅವರ ನಿವಾಸಗಳಿಗೆ ತೆಲಂಗಾಣದಾದ್ಯಂತದ ಸಾವಿರಾರು ಸಾಮಾಜಿಕ ಹೋರಾಟಗಾರರು, ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಮಾನವ ಹಕ್ಕು ಹೋರಾಟಗಾರರು ಭೇಟಿ ನೀಡುತ್ತಿದ್ದಾರೆ. ಮುತ್ತಿರೆಡ್ಡಿಕುಂಟದಲ್ಲಿರುವ ಮನೆಯ ಹೊರಭಾಗದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ದಲಿತ ಸಂಘಟನೆಗಳು ಘೋಷಣೆಗಳು ಕೂಗುತ್ತಿವೆ ಹಾಗೂ ಮೇಲ್ಜಾತಿ ಪೂರ್ವಾಗ್ರಹದ ವಿರುದ್ಧ ಹೋರಾಡಲು ಸಂಘಟಿತರಾಗಬೇಕು ಎಂದು ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News