ಚತ್ತೀಸ್‌ಗಡದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟ ಮಾಯಾವತಿ: ಜನತಾ ಕಾಂಗ್ರೆಸ್‌ ಜೊತೆ ಮೈತ್ರಿ

Update: 2018-09-20 16:04 GMT

ರಾಯ್‌ಪುರ, ಸೆ.20: ಚತ್ತೀಸ್‌ಗಡದ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಆಘಾತ ನೀಡಿರುವ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ, ಅಜಿತ್ ಜೋಗಿಯವರ ಜನತಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಎಸ್‌ಪಿ 35 ಸ್ಥಾನಗಳಲ್ಲಿ ಸ್ಪರ್ಧಿಸಿದರೆ ಜನತಾ ಕಾಂಗ್ರೆಸ್ 55 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ನಾವು ಗೆದ್ದರೆ ಜೋಗಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಯಾವತಿ ತಿಳಿಸಿದ್ದಾರೆ. ಮೈತ್ರಿ ಕುರಿತು ಮಾತನಾಡಿರುವ ಅಜಿತ್ ಜೋಗಿ, ಬಿಜೆಪಿ ಕಳೆದ 15 ವರ್ಷಗಳಿಂದ ಚತ್ತೀಸ್‌ಗಡದಲ್ಲಿ ಆಡಳಿತ ನಡೆಸಿದೆ. ಆದರೆ ಅಧಿಕಾರ, ಹಣ ಮತ್ತು ಕಾನೂನನ್ನು ದುರುಪಯೋಗಪಡಿಸಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಈಗ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ನಾವು ಮತ್ತು ಮಾಯಾವತಿಯವರು ಸೇರಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಚತ್ತೀಸ್‌ಗಡ, ರಾಜಸ್ಥಾನ, ಮಧ್ಯಪ್ರದೇಶ, ಮಿಝೋರಾಂ ಮತ್ತು ತೆಲಂಗಾಣದಲ್ಲಿ ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ಗೆ ಆಘಾತ

ಮಧ್ಯಪ್ರದೇಶದಲ್ಲಿ ಕಳೆದ ಐದು ತಿಂಗಳಿನಿಂದ ಕಾಂಗ್ರೆಸ್ ಬಿಎಸ್‌ಪಿ ಜೊತೆ ಮೈತ್ರಿ ಮಾತುಕತೆ ನಡೆಸುತ್ತಿದೆ. ಆದರೆ ಇಲ್ಲಿ ಈ ವರ್ಷಾಂತ್ಯಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 22 ಸ್ಥಾನಗಳಲ್ಲಿ ಸ್ಪರ್ಧಿಸಲಿರುವ ತನ್ನ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಮಾಯಾವತಿ ಕಾಂಗ್ರೆಸ್‌ಗೆ ಮತ್ತೊಂದು ಶಾಕ್ ನೀಡಿದ್ದಾರೆ. ಈ ಪೈಕಿ ಕೆಲವು ಸ್ಥಾನಗಳು ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಜ್ಯೋತಿರಾಧಿತ್ಯ ಸಿಂಧ್ಯಾ ಪ್ರಾಬಲ್ಯ ಹೊಂದಿರುವ ಮೊರೆನ ಮತ್ತು ಶಿವಪುರಿಯಲ್ಲಿದೆ. ಮಾಯಾವತಿ ಈ ರೀತಿ ಮಾಡಿದ್ದಾರೆ ಎಂದು ತಿಳಿದಿಲ್ಲ. ಈ ಬೆಳವಣಿಗೆಯನ್ನು ನಾವು ನಿರೀಕ್ಷಿಸಿರಲಿಲ್ಲ. ಈಗಲೂ ನಾವು ಬಿಎಸ್‌ಪಿ ಜೊತೆ ಮಾತುಕತೆ ಮುಂದುವರಿಸಿದ್ದೇವೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News