ಶೇರುಪೇಟೆಯಲ್ಲಿ ರಕ್ತಪಾತದ ಬಳಿಕ ಮರು ಚೇತರಿಕೆ: 1,500 ಅಂಶಗಳಷ್ಟು ಹೊಯ್ಡಾಡಿದ ಸೆನ್ಸೆಕ್ಸ್

Update: 2018-09-21 13:59 GMT

ಹೊಸದಿಲ್ಲಿ,ಸೆ.21: ಭಾರತೀಯ ಶೇರು ಮಾರುಕಟ್ಟೆ ಶುಕ್ರವಾರ ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಗಿತ್ತು. ಮಧ್ಯಂತರ ವಹಿವಾಟಿನಲ್ಲಿ ಬಾಂಬೆ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ ದಿಢೀರನೆ 1,100 ಅಂಶಗಳ ಕುಸಿತ ದಾಖಲಿಸಿದ್ದು, 1495.60 ಅಂಶಗಳಷ್ಟು ಹೊಯ್ಡಾಡಿ ಹೂಡಿಕೆದಾರರಿಗೆ ನಡುಕ ಹುಟ್ಟಿಸಿತ್ತು.

ಮಧ್ಯಂತರದ ವಹಿವಾಟಿನಲ್ಲಿ ದಿನದ ಕನಿಷ್ಠ ಮಟ್ಟವಾದ 35,993.64ಕ್ಕೆ ಕುಸಿದಿದ್ದ ಸೆನ್ಸೆಕ್ಸ್ ಶೀಘ್ರವೇ ಚೇತರಿಸಿಕೊಂಡು ಹೆಚ್ಚಿನ ನಷ್ಟವನ್ನು ಭರ್ತಿ ಮಾಡಿಕೊಂಡಿತು. ಅಂತಿಮವಾಗಿ 279.62 ಅಂಶಗಳ ನಷ್ಟದೊಂದಿಗೆ 36,841.60ಕ್ಕೆ ದಿನದಾಟವನ್ನು ಮುಗಿಸಿತು.

ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ ಕೂಡ ಮಧ್ಯಂತರ ವಹಿವಾಟಿನಲ್ಲಿ 11,000ಕ್ಕೂ ಕೆಳಕ್ಕೆ ಪತನಗೊಂಡಿದ್ದು, ಅಂತಿಮವಾಗಿ 91.25 ಅಂಶಗಳ ನಷ್ಟದೊಡನೆ 11,143.10ಕ್ಕೆ ಮುಕ್ತಾಯ ಗೊಂಡಿತು.

ಮಾರುಕಟ್ಟೆ ಬೆಳಿಗ್ಗೆ ಸುಮಾರು ಶೇ.1ರಷ್ಟು ಏರಿಕೆಯೊಂದಿಗೆ ಧನಾತ್ಮಕವಾಗಿಯೇ ಆರಂಭಗೊಂಡಿದ್ದು,ಒಂದು ಹಂತದಲ್ಲಿ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಶಗಳ ಏರಿಕೆಯನ್ನು ದಾಖಲಿಸಿತ್ತು.

ಮೂಲಸೌಕರ್ಯ ಹಣಕಾಸು ಸಂಸ್ಥೆಯಾಗಿರುವ ಐಎಲ್‌ಆ್ಯಂಡ್‌ಎಫ್‌ಎಸ್ ನಲ್ಲಿಯ ಬಿಕ್ಕಟ್ಟು ಮಾರುಕಟ್ಟೆಯ ಕುಸಿತಕ್ಕೆ ಕಾರಣವಾಗಿತ್ತು ಎಂದು ಮಾರುಕಟ್ಟೆ ವಿಶ್ಲೇಷಕರು ಬೆಟ್ಟು ಮಾಡಿದ್ದಾರೆ.

ಐಎಲ್‌ಆ್ಯಂಡ್‌ಎಫ್‌ಎಸ್ ತೀವ್ರ ಹಣಕಾಸು ಬಿಕ್ಕಟಿಗೆ ಸಿಲುಕಿದ್ದು, 100ಕೋ.ರೂ.ಗಳ ಸಾಲ ಮರುಪಾವತಿಸುವಲ್ಲಿ ವಿಫಲಗೊಂಡಿದೆ. ಆರ್‌ಬಿಐ ಕಂಪನಿಯ ಮೇಲೆ ಕಣ್ಣಿಟ್ಟಿದೆ. ಡಿಎಚ್‌ಎಫ್‌ಸಿ,ಕ್ಯಾನ್ ಫಿನ್ ಹೋಮ್ಸ್‌ನಂತಹ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಶೇರುಗಳೂ ಶುಕ್ರವಾರ ಶೇ.55ರವರೆಗೆ ಕುಸಿದಿವೆ.

ಔಷಧಿ ಮತ್ತು ಸರಕಾರಿ ಬ್ಯಾಂಕುಗಳ ಕ್ಷೇತ್ರಗಳ ಶೇರುಗಳೂ ಕುಸಿತವನ್ನು ಕಂಡಿವೆ.

ಎಸ್ ಬ್ಯಾಂಕ್‌ನ ಸಿಇಒ ಮತ್ತು ಎಂಡಿ ರಾಣಾ ಕಪೂರ್ ಅವರ ಅಧಿಕಾರಾವಧಿಯನ್ನು ಆರ್‌ಬಿಐ ಮೊಟಕುಗೊಳಿಸಿದ ಹಿನ್ನೆಲೆಯಲ್ಲಿ ಅದರ ಶೇರುಗಳು ಶೇ.27.71ರಷ್ಟು ನಷ್ಟವನ್ನು ಅನುಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News