ಲೈಂಗಿಕ ಅಪರಾಧಿಗಳ ಡೇಟಾಬೇಸ್, ಜಾಲತಾಣಕ್ಕೆ ಚಾಲನೆ ನೀಡಿದ ಗೃಹ ಸಚಿವಾಲಯ

Update: 2018-09-21 14:08 GMT

ಹೊಸದಿಲ್ಲಿ, ಸೆ.21: ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಲೈಂಗಿಕ ಅಪರಾಧಿಗಳ ರಾಷ್ಟ್ರೀಯ ದತ್ತಾಂಶಮೂಲ ಮತ್ತು ಮಕ್ಕಳ ಅಶ್ಲೀಲ ಚಿತ್ರಗಳು, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೊಗಳು ಮತ್ತು ಅತ್ಯಾಚಾರ ಹಾಗೂ ಸಾಮೂಹಿಕ ಅತ್ಯಾಚಾರದಂಥ ವಿಡಿಯೊಗಳನ್ನು ಹೊಂದಿರುವ ಜಾಲತಾಣಗಳ ಬಗ್ಗೆ ವರದಿ ಸಲ್ಲಿಸಲು ಪ್ರತ್ಯೇಕ ಜಾಲತಾಣಕ್ಕೆ ಚಾಲನೆ ನೀಡಿತು.

ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿಗೆ ಚಾಲನೆ ನೀಡುವ ಮೂಲಕ ಭಾರತ, ಇದೇ ರೀತಿಯ ರಿಜಿಸ್ಟ್ರಿಯನ್ನು ಕಾಯ್ದುಕೊಂಡು ಬಂದಿರುವ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ, ಕೆನಡ, ಐರ್‌ಲೆಂಡ್, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ ಹಾಗೂ ಡ್ರಿನಿಡಡ್ ಮತ್ತು ಟೊಬ್ಯಾಗೊ ದೇಶಗಳ ಪಟ್ಟಿಗೆ ಸೇರಿದೆ. ಈ ಎರಡೂ ಅಭಿಯಾನಗಳನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಲಹೆಯಂತೆ ಆರಂಭಿಸಲಾಗಿದೆ.

ಈ ರಿಜಿಸ್ಟ್ರಿಯಲ್ಲಿ ದಾಖಲಾಗಿರುವ ಭಾವಚಿತ್ರಗಳು ಮತ್ತು ಗುರುತಿನ ಚೀಟಿಗಳನ್ನು ಕೇವಲ ಕಾನೂನು ಜಾರಿ ಸಂಸ್ಥೆಗಳಿಗೆ ಮಾತ್ರ ನೋಡಲು ಸಾಧ್ಯವಾಗಲಿದ್ದು ಆಮೂಲಕ ಲೈಂಗಿಕ ಅಪರಾಧಗಳ ತನಿಖೆ ನಡೆಸಲು ಮತ್ತು ಅಪರಾಧಿಗಳನ್ನು ಪತ್ತೆ ಮಾಡಲು ತನಿಖಾ ಸಂಸ್ಥೆಗಳಿಗೆ ನೆರವಾಗಲಿದೆ. ಇನ್ನು ನೂತನವಾಗಿ ಚಾಲನೆ ನೀಡಲಾಗಿರುವ ಜಾಲತಾಣದಲ್ಲಿ, ಮಕ್ಕಳ ಅಶ್ಲೀಲ ಚಿತ್ರಗಳು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೊಗಳು ಅಥವಾ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದಂಥ ವಿಡಿಯೊಗಳ ವಿರುದ್ಧ ದೂರು ದಾಖಲಿಸಬಹುದಾಗಿದೆ. ಹೀಗೆ ದಾಖಲಿಸುವ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ದೂರುದಾರರು ಇಂಥ ವಿಡಿಯೊಗಳ ಯುಆರ್‌ಎಲ್‌ಗಳನ್ನು ಒದಗಿಸುವ ಮೂಲಕ ತನಿಖೆಯಲ್ಲಿ ನೆರವಾಗಬಹುದಾಗಿದೆ.

ಜಾಲತಾಣಗಳಲ್ಲಿ ಕಂಡುಬರುವ ಆಕ್ಷೇಪಾರ್ಹ ವಿಷಯಗಳನ್ನು ಗುರುತಿಸಿ ಅದನ್ನು ತೆಗೆದುಹಾಕುವಂತೆ ಸಂಬಂಧಪಟ್ಟವರಿಗೆ ಸೂಚಿಸುವ ಕಾರ್ಯವನ್ನು ರಾಷ್ಟ್ರೀಯ ಅಪರಾಧ ದಾಖಲೆ ಮಂಡಳಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News