ಬಂಧಿತ ಹೋರಾಟಗಾರರಿಗೆ ಸಿಟ್ ತನಿಖೆಗೆ ಆಗ್ರಹಿಸುವ ಹಕ್ಕಿಲ್ಲ: ಮಹಾರಾಷ್ಟ್ರ ಸರಕಾರ

Update: 2018-09-21 14:11 GMT

ಹೊಸದಿಲ್ಲಿ, ಸೆ.21: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಹೋರಾಟಗಾರರಿಗೆ, ಪ್ರಕರಣದ ತನಿಖೆಯನ್ನು ನ್ಯಾಯಾಲಯದ ನಿಗಾವಣೆಯಲ್ಲಿ ವಿಶೇಷ ತನಿಖಾ ತಂಡ (ಸಿಟ್)ಕ್ಕೆ ಒಪ್ಪಿಸಬೇಕೆಂದು ಆಗ್ರಹಿಸುವ ಹಕ್ಕಿಲ್ಲ ಎಂದು ಮಹಾರಾಷ್ಟ್ರ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಬಂಧಿತ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಕೋರಿ ಇತಿಹಾಸತಜ್ಞೆ ರೊಮಿಲಾ ಥಾಪರ್ ಹಾಕಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿರುವ ಸರಕಾರ, ಈ ಅರ್ಜಿಯಲ್ಲಿ ತನಿಖಾ ಸಂಸ್ಥೆಯ ವಿರುದ್ಧ ತಲೆಬುಡವಿಲ್ಲದ ಆರೋಪಗಳನ್ನು ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ. ಆರೋಪಿಗಳು ಕೂಡಲೇ ತನಿಖಾ ಸಂಸ್ಥೆಗೆ ಶರಣಾಗಬೇಕು ಎಂದು ಸೂಚಿಸಬೇಕೆಂದು ರಾಜ್ಯ ಸರಕಾರವು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ಮನವಿ ಮಾಡಿದೆ.

ಒಂದೇ ಪರಿಹಾರಕ್ಕಾಗಿ ಸರ್ವೋಚ್ಚ ನ್ಯಾಯಾಲಯ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿರುವುದು, ಕಾನೂನು ಪ್ರಕ್ರಿಯೆಯನ್ನು ನಿಂದಿಸುವ ಅಸ್ಪಷ್ಟ ಲಜ್ಜೆಗೆಟ್ಟ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ ಎಂದು ಸರಕಾರ ತಿಳಿಸಿದೆ. ನಾವು ಹೋರಾಟಗಾರರಾದ ಕಾರಣ ಭಿನ್ನಾಭಿಪ್ರಾಯವನ್ನು ನಿಯಂತ್ರಿಸುವ ಉದ್ದೇಶದಿಂದ ನಮ್ಮನ್ನು ಪೀಡಿಸಲಾಗುತ್ತಿದೆ ಎಂದು ಆರೋಪಿಗಳು ಹೇಳುವ ಮೂಲಕ ತನಿಖಾ ಸಂಸ್ಥೆಯ ಮೇಲೆ ಅಸಂಬದ್ಧ ಆರೋಪವನ್ನು ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News