ಸ್ವಾಭಿಮಾನ ರ್ಯಾಲಿ ನಡೆಸಲಿರುವ ರಾಜಸ್ಥಾನದ ಬಿಜೆಪಿ ಬಂಡಾಯ ಶಾಸಕ

Update: 2018-09-21 14:42 GMT

ಬರ್ಮೆರ್, ಸೆ.21: ಮತದಾರರ ಆತ್ಮಾಭಿಮಾನ ಅಪಾಯದಲ್ಲಿದೆ ಎಂದು ಆರೋಪಿಸಿರುವ ರಾಜಸ್ಥಾನ ಬಿಜೆಪಿಯ ಬಂಡಾಯ ಶಾಸಕ ಮತ್ತು ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್ ಶನಿವಾರ ಬರ್ಮೆರ್‌ನಲ್ಲಿ ಸ್ವಾಭಿಮಾನ ನಡೆಸಲಿರುವುದಾಗಿ ಘೊಷಿಸಿದ್ದಾರೆ.

ತಾನು ಬಿಜೆಪಿಯಲ್ಲಿ ಉಳಿಯಬೇಕೇ ಅಥವಾ ಇಲ್ಲವೇ ಎಂಬುದು ಈ ರ್ಯಾಲಿಯ ನಂತರವಷ್ಟೇ ನಿರ್ಧರಿಸಲಿರುವುದಾಗಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಮಾನವೇಂದ್ರ ತಿಳಿಸಿದ್ದಾರೆ. ಅವರು ಇತ್ತೀಚೆಗೆ ನಡೆದ ಮುಖ್ಯಮಂತ್ರಿ ವಸುಂಧರಾ ರಾಜೆಯವರು ಬರ್ಮೆರ್ ಮತ್ತು ಪಚ್‌ಪದ್ರದಲ್ಲಿ ನಡೆಸಿದ ಗೌರವ ಯಾತ್ರೆಯಿಂದ ದೂರವುಳಿದಿದ್ದರು. ತಂದೆ ಜಸ್ವಂತ್ ಸಿಂಗ್‌ಗೆ ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಣೆ ಮಾಡಿದಂದಿನಿಂದ ಮಾನವೇಂದ್ರ ಮತ್ತು ಬಿಜೆಪಿ ನಡುವೆ ಒಡಕು ಮೂಡಿತ್ತು. ಜಸ್ವಂತ್ ಸಿಂಗ್‌ಗೆ ಟಿಕೆಟ್ ನಿರಾಕರಿಸಿ ಅವರ ಸ್ಥಾನದಲ್ಲಿ ವುಸುಂಧರಾ ರಾಜೆಯ ಸಲಹೆಯಂತೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ್ದ ಕರ್ನಲ್ ಸೋನಾರಾಮ್‌ಗೆ ಟಿಕೆಟ್ ನೀಡಲಾಗಿತ್ತು.

ಜನರು ಆಕ್ರೋಶಿತರಾಗಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಲಾಗಿಲ್ಲ. ರೈತರು ಕೋಪಗೊಂಡಿದ್ದಾರೆ. ಇದು ನನ್ನ ಕುಟುಂಬದ ಘನತೆಯ ಪ್ರಶ್ನೆಯಲ್ಲ ಬದಲಿಗೆ ಇಡೀ ಪ್ರದೇಶದ ಜನರ ಆತ್ಮಾಭಿಮಾನದ ಪ್ರಶ್ನೆಯಾಗಿದೆ ಎಂದು ಮಾನವೇಂದ್ರ ಅವರ ಪತ್ನಿ ಚಿತ್ರಾ ಸಿಂಗ್ ಆಂಗ್ಲ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆಗಸ್ಟ್ 27ರಂದು ಮಾನವೇಂದ್ರ ಸ್ವಾಭಿಮಾನ ರ್ಯಾಲಿಯನ್ನು ಘೋಷಿಸಿದ್ದು ಅಂದಿನಿಂದ ಬರ್ಮೆರ್ ಮತ್ತು ಜೈಸಲ್ಮೇರ್‌ನಲ್ಲಿ ವ್ಯಾಪಕ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಬಹುತೇಕ ಎಲ್ಲ ಸಮುದಾಯದ ಜನರನ್ನು ಭೇಟಿ ಮಾಡುತ್ತಿರುವ ಅವರು ಶನಿವಾರ (ಇಂದು) ನಡೆಯಲಿರುವ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಬರ್ಮೆರ್‌ನಲ್ಲಿ ರಜಪೂತ, ದಲಿತ ಮತ್ತು ಮುಸ್ಲಿಂ ಮತದಾರರ ಸಂಖ್ಯೆ ಬಹುತೇಕ ಸಮಾನವಾಗಿದ್ದು ಇವರು ಈ ಹಿಂದೆಯೂ ಜಸ್ವಂತ್ ಮತ್ತು ಮಾನವೇಂದ್ರ ಸಿಂಗ್‌ರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News