ತನಿಖೆ ನಡೆಸದೆ ಎಸ್ಸಿ, ಎಸ್ಟಿ ಕಾಯ್ದೆ ಅಡಿ ಬಂಧನವಿಲ್ಲ: ಮೇಲ್ಜಾತಿ ಜನರನ್ನು ಸಮಾಧಾನಿಸಲು ಮಧ್ಯಪ್ರದೇಶ ಸಿಎಂ ಪ್ರಯತ್ನ

Update: 2018-09-21 14:56 GMT

ಭೋಪಾಲ್, ಸೆ. 20: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೇಲ್ಜಾತಿಯ ಜನರನ್ನು ಸಮಾಧಾನಪಡಿಸುವ ಪ್ರಯತ್ನವಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ದುರ್ಬಳಕೆ ಆಗದಂತೆ ಭರವಸೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ.

 ‘‘ಮಧ್ಯ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸದೆ ಯಾರನ್ನೂ ಬಂಧಿಸುವುದಿಲ್ಲ’’ ಎಂದು ಚೌಹಾಣ್ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ನಿರ್ದೇಶನಗಳನ್ನು ಶೀಘ್ರದಲ್ಲಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಕ್ರೋಶಕ್ಕೆ ಒಳಗಾಗಿದ್ದ ಸುಪ್ರೀಂ ಕೋರ್ಟ್ ಈ ವರ್ಷ ಮಾರ್ಚ್‌ನಲ್ಲಿ ನೀಡಿದ ತೀರ್ಪನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ರದ್ದುಪಡಿಸಿ ತಿದ್ದುಪಡಿ ಮಾಡಿದ ಹೊರತಾಗಿಯೂ ಶಿವರಾಜ್ ಚೌಹಾಣ್ ಈ ಘೋಷಣೆ ಹೊರಡಿಸಿದ್ದಾರೆ.

 ಸುಪ್ರೀಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ರದ್ದುಗೊಳಿಸಿರುವ ಬಗ್ಗೆ ಮಧ್ಯಪ್ರದೇಶದ ಮೇಲ್ಜಾತಿಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಮಂಜೂರಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಮಸೂದೆ 2018ರ ವಿರುದ್ಧ ರಾಜ್ಯದ ವಿವಿಧ ಭಾಗಗಳಲ್ಲಿ ಜನರು ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ದೂರು ನೀಡಿದ ತತ್‌ಕ್ಷಣ ಬಂಧಿಸುವ ನಿಯಮದಿಂದ ಈ ವರ್ಷ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್ ಸುರಕ್ಷೆ ನೀಡಿತ್ತು. ಆದಾಗ್ಯೂ, ತಿದ್ದುಪಡಿ ಮಸೂದೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಯ್ದೆ (ದೌರ್ಜನ್ಯ ತಡೆ) ಯಲ್ಲಿ ಕೆಲವು ಕಠಿಣ ನಿಯಮಗಳನ್ನು ಮರು ಸ್ಥಾಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News