“ಪ.ಬಂಗಾಳದಲ್ಲಿ ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ಇಲ್ಲ”

Update: 2018-09-21 16:04 GMT

ಕೋಲ್ಕತ್ತಾ, ಸೆ. 21: ಸೆಪ್ಟಂಬರ್ 29ರಂದು ಸರ್ಜಿಕಲ್ ಸ್ಟ್ರೈಕ್ ದಿನ ಆಚರಿಸಬೇಕು ಎಂದು ವಿಶ್ವವಿದ್ಯಾನಿಲಯದ ಅನುದಾನ ಆಯೋಗ ವಿಶ್ವವಿದ್ಯಾನಿಲಯಗಳಿಗೆ ನೀಡಿದ ನಿರ್ದೇಶನ ಬಿಜೆಪಿ ಅಜೆಂಡಾದ ಒಂದು ಭಾಗ. ಪಶ್ಚಿಮಬಂಗಾಳದ ಶಿಕ್ಷಣ ಸಂಸ್ಥೆಗಳು ಈ ದಿನ ಆಚರಿಸುವುದಿಲ್ಲ ಎಂದು ರಾಜ್ಯ ಸಚಿವ ಪಾರ್ಥಾ ಚಟರ್ಜಿ ಶುಕ್ರವಾರ ಹೇಳಿದ್ದಾರೆ.

 ಸೇನೆಯ ಹೆಸರು ಕೆಡಿಸುವ ಹಾಗೂ ರಾಜಕೀಯಗೊಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಎಂದು ಶಿಕ್ಷಣ ಸಚಿವರು ಕಟುವಾಗಿ ಟೀಕಿಸಿದ್ದಾರೆ. 2016 ಸೆಪ್ಟಂಬರ್ 29ರಂದು ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ‘‘ಇದು ಬಿಜೆಪಿಯ ಅಜೆಂಡಾ. ಚುನಾವಣೆಗೆ ಮುನ್ನ ವಿಶ್ವವಿದ್ಯಾನಿಲಯ ಅನುದಾನ ಆಯೋಗವನ್ನು ಬಳಸಿಕೊಂಡು ತಮ್ಮ ಅಜೆಂಡಾ ಸ್ಥಾಪಿಸುವ ಪ್ರಯತ್ನ ಇದಾಗಿದೆ. ತಮ್ಮ ರಾಜಕೀಯ ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ವಿಶ್ವವಿದ್ಯಾನಿಲಯ ಅನುದಾನ ಆಯೋಗವನ್ನು ಬಳಸಿಕೊಳ್ಳುತ್ತಿರುವುದು ಅವಮಾನದ ವಿಚಾರ’’ ಎಂದು ಚಟರ್ಜಿ ಹೇಳಿದ್ದಾರೆ.

ಹುತಾತ್ಮ ಯೋಧರ ಹೆಸರಿನಲ್ಲಿ ಸರ್ಜಿಕಲ್ ಸ್ಟ್ರೈಕ್ ದಿನ ಆಚರಿಸಬೇಕು ಎಂದು ಅವರು ನಿರ್ದೇಶಿಸುತ್ತಿರುವುದು ಯಾಕೆಂದು ನಮಗೆ ಅರಿವಿದೆ. ನಾವು ನಮ್ಮ ಯೋಧರಿಗೆ ಹಾಗೂ ಅವರ ಬಲಿದಾನಕ್ಕೆ ಗೌರವ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. ಭಾರತೀಯ ಸೇನೆಯನ್ನು ರಾಜಕೀಯ ಹಾಗೂ ವಿವಾದಗಳಿಂದ ದೂರ ಇರಿಸಬೇಕು. ಆದರೆ, ಈಗ ಬಿಜೆಪಿ ಭಾರತೀಯ ಸೇನೆಯನ್ನು ಅವಮಾನಿಸುವ ಹಾಗೂ ರಾಜಕೀಯಗೊಳಿಸುವ ಪ್ರಯತ್ನ ನಡೆಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ನಾವು ಇದಕ್ಕೆ ಬೆಂಬಲ ನೀಡಲಾರೆವು ಎಂದು ಚಟರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News