ರೂಪಾಯಿ ದುರ್ಬಲಗೊಂಡಿದ್ದರೂ ಆರ್‌ಬಿಐ ರೆಪೊ ದರ ಹೆಚ್ಚಿಸುವ ಸಾಧ್ಯತೆ ಕಡಿಮೆ: ನೋಮುರಾ

Update: 2018-09-21 16:18 GMT

ಮುಂಬೈ,ಸೆ.21: ರೂಪಾಯಿ ದುರ್ಬಲಗೊಂಡಿರುವುದು ಆರ್‌ಬಿಐನಿಂದ ರೆಪೊ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲ)ದರ ಏರಿಕೆಗೆ ಬಲವಾದ ಕಾರಣವಲ್ಲ ಮತ್ತು ಮುಂದಿನ ತಿಂಗಳು ತನ್ನ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ಬಿಐ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬಹುದು ಎಂದು ಜಪಾನ್‌ನ ಬ್ರೋಕರೇಜ್ ಸಂಸ್ಥೆ ನೋಮುರಾ ಶುಕ್ರವಾರ ತನ್ನ ವರದಿಯಲ್ಲಿ ತಿಳಿಸಿದೆ.

ಜುಲೈನಲ್ಲಿ ಶೇ.4.2ರಷ್ಟಿದ್ದ ಬಳಕೆದಾರ ಬೆಲೆ ಸೂಚ್ಯಂಕ(ಸಿಪಿಐ) ಹಣದುಬ್ಬರವು ಆಗಸ್ಟ್ ನಲ್ಲಿ ಶೇ.3.7ಕ್ಕೆ ಇಳಿದಿರುವುದೂ ತನ್ನ ಲೆಕ್ಕಾಚಾರಕ್ಕೆ ಪುಷ್ಟಿ ನೀಡುತ್ತಿದೆ ಎಂದು ವರದಿಯು ತಿಳಿಸಿದೆ.

ಆರ್‌ಬಿಐ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಸಾಧ್ಯತೆ ಶೇ.60ರಷ್ಟಿದೆ ಎಂದಿರುವ ಸಂಸ್ಥೆಯ ಆರ್ಥಿಕ ತಜ್ಞರು, ಆದರೆ ಕರೆನ್ಸಿ ದೌರ್ಬಲ್ಯ ಮತ್ತು ಅಧಿಕ ತೈಲಬೆಲೆಗಳಿಂದಾಗಿ ರೆಪೊ ದರ ಹೆಚ್ಚಳದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ.

ಈ ವರ್ಷ ರೂಪಾಯಿಯು ಡಾಲರ್‌ನೆದುರು ಶೇ.12ಕ್ಕೂ ಹೆಚ್ಚು ಕುಸಿತವನ್ನು ಕಾಣುವ ಮೂಲಕ ದುರ್ಬಲ ಕರೆನ್ಸಿಗಳ ಸಾಲಿಗೆ ಸೇರಿದೆ. ಇದೇ ವೇಳೆ ಕಚ್ಚಾ ತೈಲಗಳ ಬೆಲೆಗಳೂ ಏರಿಕೆಯಾಗುತ್ತಿರುವುದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News