‘ಮನ್‌ಮರ್ಝಿಯಾನ್’ ನಿರ್ಮಾಪಕ, ನಿರ್ದೇಶಕರಿಗೆ ನೋಟಿಸ್ ಜಾರಿ

Update: 2018-09-21 17:26 GMT

ಜೈಪುರ, ಸೆ.21: ಹಿಂದಿ ಸಿನೆಮ ಮನ್‌ಮರ್ಝಿಯಾನ್’ದಲ್ಲಿ ಸಿಖ್ ಸಮುದಾಯದವರ ಭಾವನೆಗೆ ಘಾಸಿಯಾಗುವ ಆಕ್ಷೇಪಾರ್ಹ ದೃಶ್ಯಗಳಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜಸ್ತಾನದ ಅಲ್ಪಸಂಖ್ಯಾತ ಆಯೋಗವು ಕೇಂದ್ರ ಸೆನ್ಸಾರ್ ಮಂಡಳಿ , ಸಿನೆಮದ ನಿರ್ದೇಶಕ ಹಾಗೂ ನಿರ್ಮಾಪರಿಗೆ ನೋಟಿಸ್ ಜಾರಿಗೊಳಿಸಿದೆ.

ಅನುರಾಗ್ ಕಶ್ಯಪ್ ನಿರ್ದೇಶನದ ಸಿನೆಮಾದಲ್ಲಿ ಸಿಖ್ ಸಮುದಾಯದವರ ಭಾವನೆಗಳಿಗೆ ಘಾಸಿ ಎಸಗುವ ಕೆಲವು ದೃಶ್ಯಗಳಿವೆ. ಸಿನೆಮದಲ್ಲಿ ಸಿಖ್ ಪಾತ್ರ ವಹಿಸಿರುವ ಅಭಿಷೇಕ್ ಬಚ್ಚನ್ ಒಂದು ದೃಶ್ಯದಲ್ಲಿ ಟರ್ಬನ್ ಧರಿಸಿಲ್ಲ ಹಾಗೂ ಧೂಮಪಾನ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ ಎಂದು ಆಯೋಗದ ಅಧ್ಯಕ್ಷ ಜಸ್ಬೀರ್ ಸಿಂಗ್ ತಿಳಿಸಿದ್ದಾರೆ.

ಪತ್ರಿಕೆಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆ. ಅಲ್ಲದೆ ಸಿಖ್ ಸಮುದಾಯದವರ ನಿಯೋಗ ತಮ್ಮನ್ನು ಭೇಟಿಯಾಗಿ ಆಕ್ಷೇಪ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿಯ ಅಧ್ಯಕ್ಷರು, ಸಿನೆಮದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆಕ್ಷೇಪಾರ್ಹ ದೃಶ್ಯಗಳನ್ನು ತಕ್ಷಣ ತೆಗೆದು ಹಾಕುವಂತೆ ಹಾಗೂ ಕೈಗೊಂಡಿರುವ ಕ್ರಮದ ಬಗ್ಗೆ ಅಕ್ಟೋಬರ್ 1ರ ಒಳಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ. ಸಿಖ್ ಸಮುದಾಯದಲ್ಲಿ ಧೂಮಪಾನ ಮಾಡುವುದು ಆಕ್ಷೇಪಾರ್ಹವಾಗಿದೆ. ಅಲ್ಲದೆ ಸಿನೆಮದ ದೃಶ್ಯವೊಂದರಲ್ಲಿ ಸಿಖ್ ಹುಡುಗಿಯೂ ಧೂಮಪಾನ ಮಾಡುತ್ತಾಳೆ ಎಂಬ ದೂರು ಕೇಳಿ ಬಂದಿದೆ. ಇಂತಹ ದೃಶ್ಯಗಳು ಸಿನೆಮದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿರುವುದು ಯಾಕೆ ಎಂದು ವಿವರಿಸುವಂತೆ ಸೆನ್ಸಾರ್ ಮಂಡಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News