ಕಾಯ

Update: 2018-09-21 18:39 GMT

ಕಾಯವಿಡಿದಿಹನ್ನಬರ ಶಿವಭಕ್ತಂಗೆ ಕಾಯಕವೆ ಕೈಲಾಸ.
ಕಾಯಕವಿಲ್ಲದವನ ಅರಿವು ವಾಯವಾಯಿತ್ತು.
ಅಡುಗೂಲಿಯ ಮನೆಯಂತೆ ಗಡಿಗೆಯ ಗಂಜಿಯಾಸೆಬೇಡ.
ಕೊಡುವರೆಂದೊಬ್ಬರ ಮನೆಗೆ ಅಡಿಗಡಿಗೆ ಹೋಗಬೇಡ.
ಇಂತಿವರಡಿಯ ಕಾಬುದಕೆ ಮೊದಲೆ ಅಡಗಿದೆಯಲ್ಲಾ,
ಮನಸಂದಿತ್ತು ಮಾರೇಶ್ವರಾ.
                                       -ಮನಸಂದ ಮಾರಿತಂದೆ

ಮನಸಂದ ಮಾರಿತಂದೆ ಕೂಡ ಆಯ್ದಕ್ಕಿ ಮಾರಯ್ಯನವರ ಸಮಕಾಲೀನ ಶರಣ. ಕಾಯಕಜೀವಿ ಶರಣರು ತಮ್ಮ ಕಾಯಕಗಳ ಬಗ್ಗೆ ಇದ್ದ ತಾದಾತ್ಮ್ಯ ಅಚ್ಚರಿಗೊಳಿಸುವಂಥದ್ದು. ಊಳಿಗಮಾನ್ಯ ಪದ್ಧತಿಯಲ್ಲಿ ಉತ್ಪಾದನಾ ಸಾಧನಗಳು ದುಡಿಯುವ ವರ್ಗದ ಸೊತ್ತಾಗಿದ್ದವು. ಕಮ್ಮಾರ, ಕುಂಬಾರ, ಬಡಿಗ, ಕಸಗುಡಿಸುವವ, ಬಾಚಿಕಾಯಕದವ, ಕನ್ನಡಿ ಕಾಯಕದವ, ನೇಕಾರ, ಅಂಬಿಗ, ಮಡಿವಾಳ, ಸಮಗಾರ, ಡೋಹರ ಹೀಗೆ ಯಾವುದೇ ಕಾಯಕದವರು ತಮ್ಮ ಉತ್ಪಾದನಾ ಸಾಧನಗಳ ಜೊತೆ ತಾದಾತ್ಮ್ಯ ಭಾವ ಹೊಂದಿದ್ದರು. ಆದರೆ ಬಂಡವಾಳಶಾಹಿ ಜಗತ್ತಿನಲ್ಲಿ ಉತ್ಪಾದನಾ ಸಾಧನಗಳು ಬಂಡವಾಳಶಾಹಿಗಳ ಕೈಸೇರಿದವು. ದೈತ್ಯಯಂತ್ರಗಳಲ್ಲಿ ಕಾರ್ಮಿಕರು ದುಡಿಯುವಾಗ ಅವರ ಮತ್ತು ಅವರು ಕೆಲಸ ಮಾಡುವ ಉತ್ಪಾದನಾ ಸಾಧನಗಳ ಮಧ್ಯೆ ತಾದಾತ್ಮ್ಯ ಮೂಡಲಿಲ್ಲ. ಇದಕ್ಕೆ ಮಾರ್ಕ್ಸ್ ‘ಪರಕೀಯ ಭಾವನೆ’ (ಏಲಿಯೆನೇಷನ್) ಎಂದು ಕರೆದಿದ್ದಾರೆ. ಕಾಯಕಜೀವಿಗಳಿಗೆ ಅವರ ಉತ್ಪಾದನಾ ಸಾಧನ ಒಂದು ತೆರನಾದ ಸ್ವಾತಂತ್ರ್ಯ ಮತ್ತು ತಾದಾತ್ಮ್ಯದ ಭಾವನೆ ಮೂಡಿಸಿತ್ತು. ಹೀಗಾಗಿ ಅವರು ತಮ್ಮ ದುಡಿಮೆಯಲ್ಲಿ ಪರಕೀಯ ಭಾವನೆಯನ್ನು ಅನುಭವಿಸಲಿಲ್ಲ. ವಿವಿಧ ಕಾಯಕಜೀವಿಗಳನ್ನು ಒಂದು ಸಮಾಜವಾಗಿ ರೂಪಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಇಂಥ ಒಂದು ಮಹಾನ್ ಸಾಧನೆ ಆ ಮೊದಲು ಜಗತ್ತಿನಲ್ಲಿ ಎಲ್ಲಿಯೂ ಆಗಿದ್ದಿಲ್ಲ.
ಕಾಯಕಜೀವಿಗಳಾದ ಶರಣರಿಗೆ ಕಾಯ ಇರುವವರೆಗೂ ಕಾಯಕವೇ ಕೈಲಾಸವಾಗಿರುತ್ತದೆ. ಕಾಯಕ ಮಾಡದವರ ಅರಿವು ಸುಳ್ಳಾಗಿ ಪರಿಣಮಿಸುವುದು. ಅಡುಗೆ ಕಾಯಕದವನ ಮನೆಯಲ್ಲಿನ ಗಡಿಗೆಯ ಗಂಜಿಗೆ ಆಸೆ ಪಡಬೇಡ. ಕೊಡುತ್ತಾರೆ ಎಂದರೆ ಅವರ ಮನೆಗೆ ಪದೇ ಪದೆ ಹೋಗಬೇಡ. ಇಂಥವರ ಹೆಜ್ಜೆ ಕಾಣುವುದಕ್ಕೆ ಮೊದಲೇ ಮರೆಯಾದೆಯಲ್ಲಾ ಮನಸಂದಿತ್ತು ಮಾರೇಶ್ವರಾ ಎಂದು ಹೇಳುವ ಮೂಲಕ ಕಾಯಕಹೀನರನು್ನ ವಿಶಿಷ್ಟ ರೀತಿಯಲ್ಲಿ ಹೀಗಳೆಯುತ್ತಾನೆ.
ಮನಸಂದ ಮಾರಯ್ಯನಿಗೆ ಕಾಯಕ ಎಂಬುದು ಆತ್ಮಗೌರವದ ಪ್ರತೀಕವಾಗಿತ್ತು. ಬದುಕಿನ ಸಾರಸರ್ವಸ್ವವನ್ನು ಆತ ಕಾಯಕದಲ್ಲಿ ಕಂಡಿದ್ದ.
ಆಯ್ದಕ್ಕಿ ಮಾರಯ್ಯ ತ್ರಿವಿಧ ದಾಸೋಹದ ಉದ್ದೇಶದಿಂದಲೇ ಗುರು, ಲಿಂಗ, ಜಂಗಮದ ಹಂಗುಹರಿದು ಕಾಯಕವೇ ಕೈಲಾಸವೆಂದು ಭಾವಿಸಿದ್ದ. ಗುರು, ಲಿಂಗ, ಜಂಗಮದ ಸೇವೆಗಾಗಿಯೇ ಆ ಹಂಗು ಹರಿದು ಕಾಯಕ ಮಾಡುವ ಆತನ ತೀವ್ರತೆ ಅರಿವೆಂಬ ಗುರುವಿನ, ತತ್ತ್ವವೆಂಬ ಲಿಂಗದ ಮತ್ತು ಜಂಗಮವೆಂಬ ಸಮಾಜದ ಕಾಳಜಿಯನ್ನು ಧ್ವನಿಪೂರ್ಣವಾಗಿ ತೋರಿಸುತ್ತದೆ. ಅವನ ಕಾಯಕವೇ ಕೈಲಾಸ ಎಂಬ ‘ಮಂತ್ರ’ದಲ್ಲಿ ಎಲ್ಲವೂ ಅಡಗಿ ಸಮಷ್ಟಿ ಪ್ರಜ್ಞೆಗೆ ಸಾಕ್ಷಿಯಾಗಿದೆ. ಆದರೆ ಮನಸಂದ ಮಾರಯ್ಯನ ‘ಕಾಯಕವೆ ಕೈಲಾಸ’ ಆತ್ಮಸಾಕ್ಷಿ ಮತ್ತು ಆತ್ಮಗೌರವದ ಪ್ರತೀಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News