ಚೀನಾ ಓಪನ್: ಸಿಂಧು, ಶ್ರೀಕಾಂತ್ ಸವಾಲು ಅಂತ್ಯ

Update: 2018-09-21 18:54 GMT

ಚಾಂಗ್‌ಝೌ(ಚೀನಾ), ಸೆ.21: ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಕಿಡಂಬಿ ಶ್ರೀಕಾಂತ್ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸಿದ್ದಾರೆ. ಈ ಮೂಲಕ ಒಂದು ಮಿಲಿಯನ್ ಡಾಲರ್ ಬಹುಮಾನ ಮೊತ್ತದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಿಂಧು ಹಾಗೂ ಶ್ರೀಕಾಂತ್ ಸವಾಲು ಅಂತ್ಯವಾಗಿದೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ ವಿಶ್ವ ಚಾಂಪಿಯನ್ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 9-21, 11-21 ನೇರ ಗೇಮ್‌ಗಳಿಂದ ಶರಣಾದರು.

ಶ್ರೀಕಾಂತ್ ಅವರು ಮೊಮೊಟಾ ವಿರುದ್ಧ ಆಡಿರುವ ಒಟ್ಟು 10 ಪಂದ್ಯಗಳ ಪೈಕಿ ಏಳನೇ ಬಾರಿ ಸೋತಿದ್ದಾರೆ. ಇಂದು ವಿಶ್ವದ ನಂ.2ನೇ ಆಟಗಾರನ ವಿರುದ್ಧ ಯಾವ ಹಂತದಲ್ಲೂ ಹೋರಾಟ ನೀಡದ ಶ್ರೀಕಾಂತ್ ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಸುಲಭವಾಗಿ ಸೋತರು. ಶ್ರೀಕಾಂತ್ ಕ್ರಮವಾಗಿ ಜೂನ್ ಹಾಗೂ ಜುಲೈನಲ್ಲಿ ನಡೆದ ಮಲೇಶ್ಯಾ ಓಪನ್ ಹಾಗೂ ಇಂಡೋನೇಶ್ಯಾ ಓಪನ್‌ನಲ್ಲಿ ಮೊಮೊಟಾ ವಿರುದ್ಧ ಸೋತಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನ ಅಂತಿಮ-8ರ ಹಂತದಲ್ಲಿ ಮೂರನೇ ಶ್ರೇಯಾಂಕದ ಸಿಂಧು ಚೀನಾದ ವಿಶ್ವದ ನಂ.6ನೇ ಆಟಗಾರ್ತಿ ಚೆನ್ ಯುಫಿ ವಿರುದ್ಧ 11-21, 21-11, 15-21 ಅಂತರದಿಂದ ಸೋತಿದ್ದಾರೆ. ಈ ಇಬ್ಬರ ನಡುವಿನ ಹೋರಾಟ ಕೇವಲ 52 ನಿಮಿಷಗಳಲ್ಲಿ ಕೊನೆಗೊಂಡಿದೆ.

ಸಿಂಧು 20ರ ಹರೆಯದ ಚೆನ್ ವಿರುದ್ಧ ಆಡಿರುವ ಕಳೆದ 6 ಪಂದ್ಯಗಳ ಪೈಕಿ ನಾಲ್ಕು ಬಾರಿ ಜಯ ಸಾಧಿಸಿದ್ದಾರೆ. ಆದರೆ, ಶುಕ್ರವಾರ ನಡೆದ ಪಂದ್ಯದಲ್ಲಿ ತನ್ನ ಎದುರಾಳಿಯ ಉತ್ತಮ ಗೇಮ್ ಪ್ಲಾನ್ ಎದುರು ಹಲವು ತಪ್ಪೆಸಗಿ ಕೈ ಸುಟ್ಟುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News