ಏಷ್ಯಾ ಕಪ್: ಪಾಕಿಸ್ತಾನಕ್ಕೆ ಅಫ್ಘಾನ್ ವಿರುದ್ಧ ರೋಚಕ ಜಯ

Update: 2018-09-22 03:50 GMT

ಅಬುಧಾಬಿ, ಸೆ.22: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್-4 ಹಂತದ ಮತ್ತೊಂದು ಪಂದ್ಯದಲ್ಲಿ ಶುಕ್ರವಾರ ಪಾಕಿಸ್ತಾನ ತಂಡವು ಅಫ್ಘಾನಿಸ್ತಾನ  ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

ಅಫ್ಘಾನ್ ಒಡ್ಡಿದ 258 ರನ್ನುಗಳ ಸವಾಲು ಬೆನ್ನಟ್ಟಿದ ಪಾಕಿಸ್ತಾನ ಕೇವಲ 3 ಎಸೆತಗಳು ಬಾಕಿ ಉಳಿದಿರುವಾಗ 7 ವಿಕೆಟ್ ಗಳ ನಷ್ಟದಲ್ಲಿ ಗುರಿ ಮುಟ್ಟಿತು. ಪಾಕಿಸ್ತಾನದ ಶೋಯೆಬ್ ಮಲಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇಲ್ಲಿನ ಶೇಖ್ ಝಾಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯ, ಹಲವು ರೋಚಕ ತಿರುವುಗಳನ್ನು ಕಂಡಿತು. ಹಷ್ಮತುಲ್ಲಾ ಶಾಹಿದಿ (ಅಜೇಯ 97) ಹಾಗೂ ಅಸ್ಗರ್ ಅಫ್ಘಾನ್(56 ಎಸೆತಗಳಲ್ಲಿ 67) ಅವರ ಭರ್ಜರಿ ಬ್ಯಾಟಿಂಗ್‌ನಿಂದ ಅಫ್ಘಾನಿಸ್ತಾನ  ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಪಾಕಿಸ್ತಾನ ಪರ ಮುಹಮ್ಮದ್ ನವಾಝ್ (57ಕ್ಕೆ 3) ಮತ್ತು ಶಹೀನ್ ಅಫ್ರಿದಿ (38ಕ್ಕೆ 2) ಉತ್ತಮ ಪ್ರದರ್ಶನ ನೀಡಿದರು.

ಮೊದಲ ಓವರ್‌ನಲ್ಲೇ ಆರಂಭಿಕ ಆಟಗಾರ ಫಖರ್ ಝಮಾನ್‌ ವಿಕೆಟ್ ಕಳೆದುಕೊಂಡ ಪಾಕಿಸ್ತಾನಕ್ಕೆ ಇಮಾಮ್ ಉಲ್ ಹಕ್ (80) ಮತ್ತು ಬಾಬರ್ ಅಝಾಮ್ (66) 154 ರನ್‌ಗಳ ಭರ್ಜರಿ ಜತೆಯಾಟ ಒದಗಿಸುವ ಮೂಲಕ ಗೆಲುವಿನ ಆಸೆ ಮೂಡಿಸಿದರು. ಆ ಬಳಿಕ ಮತ್ತೆ ಸಂಕಷ್ಟಕ್ಕೆ ಸಿಲುಕಿದ ಪಾಕಿಸ್ತಾನಕ್ಕೆ ಶೋಯೆಬ್ ಮಲಿಕ್ (43 ಎಸೆತಗಳಲ್ಲಿ 51) ಆಸರೆಯಾದರು. ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೆ, ಇನಿಂಗ್ಸ್ ಆಧರಿಸಿದ ಮಲಿಕ್, ತಂಡವನ್ನು ಗೆಲುವಿನ ದಡ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News