ಭಾರತದಿಂದ ಆಸ್ಕರ್ ಗೆ ‘ವಿಲೇಜ್ ರಾಕ್‍ಸ್ಟಾರ್ಸ್’ ಆಯ್ಕೆ

Update: 2018-09-22 08:32 GMT

ಹೊಸದಿಲ್ಲಿ, ಸೆ.22: ರೀಮಾ ದಾಸ್ ಅವರ ಅಸ್ಸಾಮೀ ಚಿತ್ರ ‘ವಿಲೇಜ್ ರಾಕ್‍ಸ್ಟಾರ್ಸ್' 2019ರ ಆಸ್ಕರ್ ಪ್ರಶಸ್ತಿಗಾಗಿ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗದಲ್ಲಿ ಭಾರತದ ಪರವಾಗಿ ಸ್ಪರ್ಧಾ ಕಣದಲ್ಲಿರಲಿದೆ.

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಯನ್ನು ಈ ಚಿತ್ರ ಪಡೆದಿತ್ತು.  ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ  ಶನಿವಾರ ಮೇಲಿನ ಘೋಷಣೆ ಮಾಡಿದೆ. ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರ ಅಧ್ಯಕ್ಷತೆಯ ತೀರ್ಪುಗಾರರ ತಂಡ ಈ ಚಿತ್ರವನ್ನು ಆಸ್ಕರ್ ಗಾಗಿ  ಭಾರತದ ಅಧಿಕೃತ ಚಿತ್ರವನ್ನಾಗಿ ಆಯ್ಕೆ ಮಾಡಿದೆ.

ರಾಝಿ, ಪದ್ಮಾವತ್, ಹಿಚ್ಕಿ, ಅಕ್ಟೋಬರ್, ಲವ್ ಸೋನಿಯಾ, ಗುಲಾಬ್ ಜಾಮೂನ್, ಮಹಾನಟಿ, ಪಿಹು, ಕಡ್ವಿ ಹವಾ, ಭೋಗ್ಡ, ರೇವಾ, ಬಯೋಸ್ಕೋಪ್‍ ವಾಲ, ಮಂಟೊ, 102 ನಾಟೌಟ್, ಪ್ಯಾಡ್ ಮ್ಯಾನ್, ಭಯಾನಕಂ, ಅಜ್ಜಿ, ನ್ಯೂಡ್ ಮತ್ತು ಗಲಿ ಗುಲಿಯಾನ್ ಚಿತ್ರಗಳೂ ಆಸ್ಕರ್ ಪ್ರವೇಶಾತಿಗಾಗಿ ಸ್ಪರ್ಧಾ

ಕಣದಲ್ಲಿದ್ದವು. ಟೊರಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಾಗತಿಕ ಪ್ರೀಮಿಯರ್ ಕಂಡ `ವಿಲೇಜ್ ರಾಕ್‍ಸ್ಟಾರ್ಸ್' ಇದರ ಪ್ರೀಮಿಯರ್ ಭಾರತದಲ್ಲಿ ಕಳೆದ ಅಕ್ಟೋಬರ್ ನಲ್ಲಿ ನಡೆದ ಜಿಯೋ ಎಂಎಎಂಐ 19ನೇ ಮುಂಬೈ ಚಲನಚಿತ್ರೋತ್ಸವದಲ್ಲಿ ನಡೆದಿತ್ತು. ಎಪ್ಪತ್ತಕ್ಕೂ ಅಧಿಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಈ ಚಿತ್ರ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳೂ ಸೇರಿದಂತೆ 44 ಪ್ರಶಸ್ತಿಗಳನ್ನು ಪಡೆದಿದೆ ಅತ್ಯುತ್ತಮ ಶೂಟಿಂಗ್ ಸ್ಥಳ, ಸೌಂಡ್ ರೆಕಾರ್ಡಿಂಗ್, ಎಡಿಟಿಂಗ್ ಮತ್ತು ಬಾಲ ಕಲಾವಿದೆ (ಭನಿತಾ ದಾಸ್) ಪ್ರಶಸ್ತಿಗಳನ್ನು ರಾಷ್ಟ್ರಮಟ್ಟದಲ್ಲಿ ಅದು ಪಡೆದಿದೆ. ಭಾರತದಲ್ಲಿ ಸೆಪ್ಟೆಂಬರ್ 28ರಂದು ಅದು ಇಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.

ಗಿಟಾರ್ ವಾದಕಿಯಾಗಬೇಕೆಂಬ ಕನಸು ಹೊತ್ತ ಬಾಲಕಿಯೊಬ್ಬಳ ಕಥಾವಸ್ತು ಈ ಚಿತ್ರ ಹೊಂದಿದೆ. ಸಂಗೀತ ಲೋಕದಲ್ಲಿ ತನಗೊಂದು ಉತ್ತಮ ಹೆಸರು ಸಂಪಾದಿಸಬೇಕೆಂದು ಹೊರಟ ಅಸ್ಸಾಂನ ಕುಗ್ರಾಮದ 10 ವರ್ಷದ ಧುಮು (ಭನಿತಾ ದಾಸ್) ಜೀವನದ ಸುತ್ತ ಈ ಚಿತ್ರದ ಕಥೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News