ರವಿವಾರ ಆಯುಷ್ಮಾನ್ ಭಾರತ್ ಲೋಕಾರ್ಪಣೆ

Update: 2018-09-22 17:55 GMT

ಹೊಸದಿಲ್ಲಿ, ಸೆ. 22: ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಭಾರತ್-ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಷನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್‌ನಲ್ಲಿ ರವಿವಾರ ಲೋಕಾರ್ಪಣೆಗೈಯಲಿದ್ದಾರೆ.

ಈ ಮಹತ್ವಾಕಾಂಕ್ಷಿ ಯೋಜನೆಗೆ ಈಗ ಪ್ರಧಾನ ಮಂತ್ರಿ ಜನ ಆರೋಗ್ಯ ಅಭಿಯಾನ (ಪಿಎಂಜೆಎವೈ) ಎಂದು ಮರು ನಾಮಕರಣ ಮಾಡಲಾಗಿದ್ದು, ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಆರೋಗ್ಯ ವಿಮೆ ಲಭ್ಯವಾಗಲಿದೆ. 10 ಕೋಟಿ ಬಡ ಕುಟುಂಬಗಳು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲಿದೆ. ಅರ್ಹ ಫಲಾನುಭವಿಗಳು ಸರಕಾರಿ ಆಸ್ಪತ್ರೆ ಹಾಗೂ ಸೂಚಿಸಲಾದ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಪಡೆಯಲು ಸಾಧ್ಯ. ಈ ಯೋಜನೆ ಬಡವರು, ಗ್ರಾಮೀಣ ದುರ್ಬಲ ಕುಟುಂಬ, ನಗರದ ಕಾರ್ಮಿಕ ಕುಟುಂಬಗಳ ಗುರುತಿಸಲಾದ ಔದ್ಯೋಗಿಕ ವರ್ಗವನ್ನು ತಲುಪಲಿದೆ. 8.03 ಕೋಟಿ ಗ್ರಾಮೀಣ ಹಾಗೂ 2.33 ಕೋಟಿ ನಗರದ ಕುಟುಂಬಗಳು ಇದರ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂದು ಸಾಮಾಜಿಕ-ಆರ್ಥಿಕ ಸಮೀಕ್ಷೆ (ಎಸ್‌ಇಸಿಸಿ) ದತ್ತಾಂಶ ಹೇಳಿದೆ.

ಎಸ್‌ಇಸಿಸಿಯ ದತ್ತಾಂಶದ ಬಡತನದ ಮಾನದಂಡದ ಆಧಾರದಲ್ಲಿ ಅರ್ಹತೆ ನಿರ್ಧರಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಬಡತನ ವರ್ಗ (ಡಿ1, ಡಿ2, ಡಿ3, ಡಿ4, ಡಿ5 ಹಾಗೂ ಡಿ7) ಆಧಾರದಲ್ಲಿ ಫಲಾನುಭವಿಗಳನ್ನು ಗುರುತಿಸಲಾಗುವುದು. ನಗರ ಪ್ರದೇಶಗಳಲ್ಲಿ 11 ಔದ್ಯೋಗಿಕ ಮಾನದಂಡಗಳನ್ನು ಪರಿಗಣಿಸಲಾಗುವುದು. ಗುಜಿರಿ ಹೆಕ್ಕುವವರು, ಬಿಕ್ಷುಕರು, ಮನೆ ಕೆಲಸದವರು, ಬೀದಿ ಬದಿ ವ್ಯಾಪಾರಿಗಳು, ಚಮ್ಮಾರರು/ತಿರುಗಿ ವ್ಯಾಪಾರ ಮಾಡುವವರು/ಬೀದಿ ಬದಿಯಲ್ಲಿ ಇತರ ಸೇವೆಗಳನ್ನು ನೀಡುವವರು/ನಿರ್ಮಾಣ ಕಾರ್ಮಿಕರು/ಪ್ಲಂಬರ್‌ಗಳು/ಮೇಸ್ತಿ/ ಕೂಲಿ ಕಾರ್ಮಿಕರು/ ಪೈಂಟರ್/ ವೆಲ್ಡರ್/ ಭದ್ರತಾ ಸಿಬ್ಬಂದಿ/ಕೂಲಿ ಹಾಗೂ ಇತರ ತಲೆ ಹೊರೆ ಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರು ಎಂಬ 11 ಉದ್ಯೋಗ ವರ್ಗಗಳು ಇದರಲ್ಲಿ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News