ರಫೇಲ್ ಒಪ್ಪಂದ ರದ್ದಾಗದು, ಸಿಎಜಿ ವರದಿಗಾಗಿ ಕಾಯುತ್ತಿದ್ದೇವೆ: ಜೇಟ್ಲಿ

Update: 2018-09-23 13:30 GMT

ಹೊಸದಿಲ್ಲಿ, ಸೆ.23: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ಆರೋಪವೇನೇ ಇರಲಿ ರಫೇಲ್ ಒಪ್ಪಂದ ಮುಂದುವರಿಯಲಿದೆ. ನಿಯಂತ್ರಕ ಮತ್ತು ಮಹಾ ಲೆಕ್ಕಪರಿಶೋಧಕರ(ಸಿಎಜಿ) ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಒಪ್ಪಂದ ಪಾರದರ್ಶಕವಾಗಿದ್ದು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಜೇಟ್ಲಿ ಹೇಳಿದ್ದಾರೆ. ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ತೀರ್ಮಾನಿಸಲಾಗಿದ್ದ ದರಕ್ಕಿಂತ ಈಗ ನಿರ್ಧರಿಸಿರುವ ದರ ಕಡಿಮೆಯಾಗಿದೆ ಎಂದು ಒತ್ತಿಹೇಳಿದ ಅವರು, ಭದ್ರತೆಯ ಹಿತಾಸಕ್ತಿಯ ಕಾರಣದಿಂದ ದರದ ಬಗ್ಗೆ ವಿವರವಾದ ಮಾಹಿತಿ ನೀಡಲಾಗದು. ಹಾಲಿ ಸರಕಾರ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಶೇ.20ರಷ್ಟು ಕಡಿಮೆ ವೆಚ್ಚ ತಗಲುತ್ತದೆ. ಇದೀಗ ಈ ಮಾಹಿತಿಯನ್ನು ಸಿಎಜಿ ಮುಂದಿರಿಸಲಾಗಿದೆ. ಅವರು ನಿರ್ಧರಿಸುತ್ತಾರೆ . ಕಾಂಗ್ರೆಸ್ ಪಕ್ಷ ಮನವಿಯನ್ನು ನೀಡಿದೆ. ಇದೀಗ ಸತ್ಯ ಹೊರಬರಲಿದೆ ಎಂದು ಹೇಳಿದರು.

ವಿವಾದ ಹಾಗೂ ಆರೋಪಗಳ ಹಿನ್ನೆಲೆಯಲ್ಲಿ ರಫೇಲ್ ಒಪ್ಪಂದವನ್ನು ರದ್ದುಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಕೇವಲ ಆರೋಪ ಮಾಡಿದ ಮಾತ್ರಕ್ಕೆ ಯಾವುದನ್ನೂ ಸಾಬೀತುಪಡಿಸಿದಂತೆ ಆಗುವುದಿಲ್ಲ. ಈ ವಿಮಾನಗಳು ದೇಶದ ಭದ್ರತೆಗೆ ಹಾಗೂ ರಕ್ಷಣೆಗೆ ಅಗತ್ಯ ಎಂಬ ಕಾರಣಕ್ಕೆ ಭಾರತಕ್ಕೆ ಬರಲಿವೆ. ಇವುಗಳಿಂದ ವಾಯುಪಡೆಯ ರಕ್ಷಣೆ ಮತ್ತು ಆಕ್ರಮಣ ಶಕ್ತಿ ವರ್ಧಿಸುತ್ತದೆ. ಸರಕಾರದಿಂದ ಸರಕಾರದ ನಡುವೆ ನಡೆದಿರುವ ಕಳಂಕರಹಿತ ಒಪ್ಪಂದ ಇದಾಗಿದೆ. ಇತಿಹಾಸದಲ್ಲೇ ಅತ್ಯಂತ ಕಳಂಕರಹಿತ ಸರಕಾರವೆಂಬ ಹೆಗ್ಗಳಿಕೆ ಮೋದಿ ಸರಕಾರದ್ದು. ಆದರೆ 2004ರಿಂದ 2014ರವರೆಗಿನ ಯುಪಿಎ ಸರಕಾರ ಅತ್ಯಂತ ಭ್ರಷ್ಟ ಸರಕಾರವಾಗಿದೆ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News