ಅತ್ಯಾಚಾರ ಪ್ರಕರಣದ ಕ್ಷಿಪ್ರ ತನಿಖೆಗೆ ವಿಶೇಷ ಕಿಟ್

Update: 2018-09-23 13:48 GMT

ಹೊಸದಿಲ್ಲಿ, ಸೆ.23: ಲೈಂಗಿಕ ದೌರ್ಜನ್ಯ ಪ್ರಕರಣಗಳ ಕ್ಷಿಪ್ರ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ದೇಶದ ಪೊಲೀಸ್ ಠಾಣೆಗಳಿಗೆ ರಕ್ತ , ವೀರ್ಯ ಹಾಗೂ ಇತರ ಸಾಕ್ಷಿಗಳ ಮಾದರಿಗಳನ್ನು ಸಂಗ್ರಹಿಸುವ ವಿಶೇಷ ಕಿಟ್‌ಗಳನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ಯಾಚಾರ ತನಿಖೆಯ ಕಿಟ್ ಎಂದು ಕರೆಯಲಾಗುವ ಇದನ್ನು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ಮತ್ತು ಕಾನೂನಾತ್ಮಕ ಸಾಕ್ಷಿಯನ್ನು ಸಂಗ್ರಹಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಪ್ರಾಯೋಗಿಕ ಯೋಜನೆಯಾಗಿ ಆರಂಭಿಕ ಹಂತದಲ್ಲಿ 3,960 ಕಿಟ್‌ಗಳನ್ನು ಪಡೆಯಲು ಗೃಹ ಸಚಿವಾಲಯ ನಿರ್ಧರಿಸಿದೆ. 

ಮೊದಲನೆ ಹಂತದಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 100 ಕಿಟ್‌ಗಳನ್ನು ಒದಗಿಸಲಾಗುವುದು. 3960 ಕಿಟ್‌ಗಳಿಗೆ 79.20 ಲಕ್ಷ ರೂ. ವೆಚ್ಚವಾಗಲಿದ್ದು ಪೊಲೀಸರಿಗೆ ಹಾಗೂ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಗಳಿಗೆ ತರಬೇತಿ ಒದಗಿಸಲು ಹೆಚ್ಚುವರಿ 4.91 ಕೋಟಿ ರೂ. ವೆಚ್ಚವಾಗಲಿದೆ. ಈ ಕಿಟ್‌ಗಳಲ್ಲಿ ಟೆಸ್ಟ್ ಟ್ಯೂಬ್‌ಗಳು, ಬಾಟಲಿಗಳು ಮುಂತಾದ ಅಗತ್ಯ ಪರಿಕರಗಳಿರುತ್ತವೆ. ಅಪರಾಧ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುವ ಬಗ್ಗೆ ಸೂಚನೆಗಳನ್ನೂ ಇದರಲ್ಲಿ ನೀಡಲಾಗಿದೆ.

ಮಾಹಿತಿ ಸಂಗ್ರಹಿಸಿದ ಬಳಿಕ ಸಮೀಪದ ಪ್ರಯೋಗಾಲಯಗಳಿಗೆ ಕಳುಹಿಸಬೇಕು. ಮೂರು ತಿಂಗಳೊಳಗೆ ಪ್ರಯೋಗಾಲಯದ ವರದಿ ಕೈಸೇರಲಿದೆ . ಪ್ರತೀ ಪೊಲೀಸ್ ಠಾಣೆಗಳಿಗೆ ಕನಿಷ್ಟ ಮೂರು ಕಿಟ್‌ಗಳನ್ನು ಒದಗಿಸುವ ಯೋಜನೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 15,640 ಪೊಲೀಸ್ ಠಾಣೆಗಳಿವೆ . ನಿರ್ಭಯಾ ನಿಧಿಯಡಿ ಕೇಂದ್ರ ಸರಕಾರ ನೀಡುವ ಆರ್ಥಿಕ ನೆರವನ್ನು ಬಳಸಿಕೊಂಡು ರಾಜ್ಯಗಳು ಈ ಕಿಟ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಕಿಟ್‌ನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು 60:40 ಪ್ರಮಾಣದಲ್ಲಿ ಹಂಚಿಕೊಳ್ಳಲಿವೆ.

 ದಿಲ್ಲಿಯಲ್ಲಿರುವ ಲೋಕನಾಯಕ ಜಯಪ್ರಕಾಶ್ ನಾರಾಯಣ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ ಆ್ಯಂಡ್ ಫೊರೆನ್ಸಿಕ್ ಸೈಯನ್ಸಸ್ ಪೊಲೀಸರಿಗೆ ಹಾಗೂ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಗಳಿಗೆ ತರಬೇತಿ ಒದಗಿಸಲಿದ್ದು, ಇದಕ್ಕೆ ಸುಮಾರು 1.38 ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆಯಿದೆ. ಈ ವೆಚ್ಚವನ್ನೂ ನಿರ್ಭಯಾ ನಿಧಿಯಿಂದ ಭರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News