ಭಿನ್ನಾಭಿಪ್ರಾಯಗಳಿಗೆ ವೇದಿಕೆಯಾಗಲಿರುವ ಕಾಂಗ್ರೆಸ್ ಪಕ್ಷದ ನೂತನ ಘಟಕ

Update: 2018-09-23 13:53 GMT

ಅಹ್ಮದಾಬಾದ್,ಸೆ.23: ಕಾಂಗ್ರೆಸ್ ನೂತನವಾಗಿ ರಚಿಸಿರುವ ‘ನಾಗರಿಕ ಮತ್ತು ಸಾಮಾಜಿಕ ಸಂಪರ್ಕ ಘಟಕ’ವು 2019ರ ಚುನಾವಣೆಗಳಿಗೆ ಮುನ್ನ ಮಾನವಹಕ್ಕು ಕಾರ್ಯಕರ್ತರು ಮತ್ತು ಎನ್‌ಜಿಒಗಳ ಭಿನ್ನಾಭಿಪ್ರಾಯದ ಧ್ವನಿಗಳಿಗೆ ವೇದಿಕೆಯನ್ನು ಒದಗಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಮಧುಸೂದನ ಮಿಸ್ತ್ರಿ ಅವರು ರವಿವಾರ ಇಲ್ಲಿ ತಿಳಿಸಿದರು.

ನಾಗರಿಕ ಸಮಾಜದ ಗುಂಪುಗಳು ಎತ್ತಿರುವ ಕೆಲವು ವಿಷಯಗಳನ್ನು ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸೇರಿಸಕೊಳ್ಳಬಹುದು ಮತ್ತು ಮಾನವ ಹಕ್ಕು ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ಗಳನ್ನೂ ನೀಡಬಹುದು ಎಂದು ನೂತನ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಿಸ್ತ್ರಿ ಹೇಳಿದರು.

ನಾಗರಿಕ ಸಮಾಜದ ಗುಂಪುಗಳು,ಮಾನವ ಹಕ್ಕು ಹೋರಾಟಗಾರರು ಮತ್ತು ಎನ್‌ಜಿಒಗಳ ಧ್ವನಿಗಳನ್ನು ಸರಕಾರವು ದಮನಿಸದಂತೆ ನೋಡಿಕೊಳ್ಳಲು ಅವುಗಳನ್ನು ತಲುಪುವುದು ಘಟಕದ ಉದ್ದೇಶವಾಗಿದೆ ಎಂದರು.

ವಿವಿಧ ರಾಜ್ಯಗಳ ಮಾನವಹಕ್ಕು ಕಾರ್ಯಕರ್ತರು ಮತ್ತು ಎನ್‌ಜಿಒಗಳ ಸಮಸ್ಯೆಗಳನ್ನು ತಿಳಿದುಕೊಳ್ಳಲು ನೂತನ ಘಟಕವು ಶೀಘ್ರವೇ ಅವರೊಂದಿಗೆ ಮಾತುಕತೆಗಳನ್ನು ಆರಂಭಿಸಲಿದೆ. ರೈತರು ಮತ್ತು ಇತರ ದುರ್ಬಲ ವರ್ಗಗಳಿಗಾಗಿ ಶ್ರಮಿಸುತ್ತಿರುವ ಮಾನವಹಕ್ಕುಗಳ ಕಾರ್ಯಕರ್ತರು ಮತ್ತು ಸಾಮಾಜಿಕ ಸಂಸ್ಥೆಗಳ ಧ್ವನಿಯನ್ನಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ಅವರು ಯಾವುದೇ ಭೀತಿಯಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಸಾಧ್ಯವಾಗುವಂತೆ ಈ ಘಟಕವನ್ನು ರಚಿಸಲಾಗಿದೆ ಎಂದರು.

ಮಾನವ ಹಕ್ಕು ಕಾರ್ಯಕರ್ತರು ಮತ್ತು ಎನ್‌ಜಿಒಗಳ ಭಿನ್ನಾಭಿಪ್ರಾಯಗಳ ಧ್ವನಿಗಳಿಗೆ ರಕ್ಷಣೆ ನೀಡುವುದು ಇಂದು ದೇಶದ ಮುಂದಿರುವ ಬೃಹತ್ ಸವಾಲು ಆಗಿದೆ ಎಂದು ಮಿಸ್ತ್ರಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News