ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಎಐಎಡಿಎಂಕೆ ಶಾಸಕನ ಬಂಧನ

Update: 2018-09-23 13:56 GMT

ಚೆನ್ನೈ,ಸೆ.23: ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ, ರಾಜ್ಯ ಪೊಲೀಸ್ ಮತ್ತು ಕೆಲವು ಸುದ್ದಿ ಸಂಸ್ಥೆಗಳ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಕಾರಣಕ್ಕೆ ಆಡಳಿತಾರೂಡ ಎಐಎಡಿಎಂಕೆ ಶಾಸಕ ಕರುಣಾಸ್ ಅವರನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ. ಖ್ಯಾತ ನಟ ಹಾಗೂ ರಾಜಕೀಯ ಪಕ್ಷದ ಸ್ಥಾಪಕರಾಗಿರುವ ಕರುಣಾಸ್‌ರನ್ನು ರವಿವಾರ ಮುಂಜಾನೆ ಅವರ ಸ್ವಗೃಹದಿಂದ ಪೊಲೀಸರ ವಿಶೇಷ ತಂಡ ವಶಕ್ಕೆ ಪಡೆದುಕೊಂಡಿದೆ.

ಶನಿವಾರ ಚೆನ್ನೈಯಲ್ಲಿ ಕರುಣಾಸ್‌ರ ಪಕ್ಷ ಮುಕ್ಕಲತೊರ್ ಪುಲಿ ಪಡೈ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡುವ ವೇಳೆ ಕರುಣಾಸ್, ತಾನು ಮುಕ್ಕಲೊತೊರ್ ಅಥವಾ ತೇವರ್ ಸಮುದಾಯಕ್ಕೆ ಸೇರಿದವನಾಗಿದ್ದರೂ ತನ್ನ ನಿಷ್ಠೆ ಮಾತ್ರ ಶಶಿಕಲಾ ಗುಂಪಿಗೆ ಮೀಸಲು. ಆದರೆ ತನ್ನದೇ ಸಮುದಾಯದ ಕೆಲ ಅಪ್ರಾಮಾಣಿಕ ಸದಸ್ಯರು ಎಡಪಡಿ ಕೆ. ಪಳನಿಸ್ವಾನಿ ಗುಂಪಿಗೆ ಸೇರಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರನ್ನುದ್ದೇಶಿಸಿ ಆರೋಪಿಸಿದ್ದರು.

ತಮಿಳುನಾಡಿನ ಬಹುತೇಕ ಮಾಧ್ಯಮಗಳು ನಡರ್ ಮತ್ತು ಐಯ್ಯರ್‌ಗಳ ಅಧೀನದಲ್ಲಿದೆ ಎಂದು ಆರೋಪಿಸಿದ ತಿರುವದನೈ ಶಾಸಕ, ಫೊಟೊ ತೆಗೆಯುವ ವೇಳೆ ಮುಖ್ಯಮಂತ್ರಿಯ ಪಕ್ಕದಲ್ಲಿ ನಿಲ್ಲದಂತೆ ನನ್ನನ್ನು ಪೊಲೀಸ್ ಅಧಿಕಾರಿಯೊಬ್ಬರು ತಡೆದಿದ್ದರು ಎಂದು ಹೇಳುತ್ತಾ, ಆ ಅಧಿಕಾರಿಗೆ ಬಹಿರಂಗ ಸವಾಲೆಸೆದಿದ್ದರು.

 ಕರುಣಾಸ್ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿಂದು ಮಕ್ಕಳ್ ಮುನ್ನಾನಿಯ ವಿ.ಜಿ ನಾರಾಯಣನ್, ಕರುಣಾಸ್ ವಿರುದ್ಧ ಚೆನ್ನೈ ಆಯುಕ್ತರಲ್ಲಿ ದೂರು ದಾಖಲಿಸಿದ್ದರು. ಈ ಬೆಳವಣಿಗೆಯ ನಂತರ ಕರುಣಾಸ್, ನನ್ನ ಉದ್ದೇಶ ಯಾವುದೇ ಸಮುದಾಯದ ಭಾವನೆಗೆ ನೋವುಂಟು ಮಾಡುವುದಾಗಿರಲಿಲ್ಲ. ಕೋಪದಿಂದ ನಾನು ಆಡಿರುವ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ಕ್ಷಮೆ ಕೇಳುವುದಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News