ನಿಷೇಧಿತ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ನಟನ ವಿರುದ್ಧ ಪ್ರಕರಣ ದಾಖಲು

Update: 2018-09-23 14:24 GMT

ಕೋಝಿಕ್ಕೋಡ್,ಸೆ.23: ನಿಷೇಧಿತ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರಣಕ್ಕಾಗಿ ಮಲಯಾಳಂ ನಟ ಜಾಯ್ ಮ್ಯಾಥ್ಯೂ ಹಾಗೂ ಇತರ 24 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಕ್ರೈಸ್ತ ಸನ್ಯಾಸಿನಿಯನ್ನು ಅತ್ಯಾಚಾರ ಮಾಡಿದ ಆರೋಪಿ ಬಿಶಪ್ ಫ್ರಾಂಕೊ ಮುಲಕ್ಕಲ್‌ರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಕೊಚ್ಚಿಯಲ್ಲಿ ಕ್ರೈಸ್ತ ಸನ್ಯಾಸಿನಿಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಮ್ಯಾಥ್ಯೂ ಹಾಗೂ ಇತರ 24 ಮಂದಿ ಸೆಪ್ಟಂಬರ್ 12ರಂದು ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದರು. ಈ ಮೆರವಣಿಗೆಯನ್ನು ಸದ್ಯ ನಿಷೇಧಾಜ್ಞೆ ಜಾರಿಯಲ್ಲಿರುವ ಇತ್ತೀಚೆಗಷ್ಟೇ ಪುನರ್‌ನವೀಕರಣಗೊಂಡ ಮಿಠಾಯಿ ತಿರುವಿನಲ್ಲಿ ನಡೆಸಲಾಗಿತ್ತು. ಮೆರವಣಿಗೆ ನಡೆಸಬೇಡಿ ಎಂದು ಹಲವು ಬಾರಿ ಮನವಿ ಮಾಡಿದರೂ ನಟ ಹಾಗೂ ಅವರ ಜೊತೆಗಿದ್ದವರು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ನಿಷೇಧಾಜ್ಞೆ ಇರುವ ಬಗ್ಗೆ ಪೊಲೀಸರು ನಮಗೆ ತಿಳಿಸಿರಲಿಲ್ಲ. ನಾನು ಈ ಮೆರವಣಿಗೆಯನ್ನು ಕ್ರೈಸ್ತ ಸನ್ಯಾಸಿನಿಯರಿಗೆ ಬೆಂಬಲವಾಗಿ ಆಯೋಜಿಸಿದ್ದೆ. ಇದೀಗ ನನ್ನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ನನ್ನನ್ನು ಹೆದರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮ್ಯಾಥ್ಯೂ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News