ಕಪ್ಪುಪಟ್ಟಿ: ವಿದೇಶಿಯರಿಗೆ,ಒಸಿಐಗಳಿಗೆ ಮೊದಲೇ ಮಾಹಿತಿ ನೀಡಲು ಹೈಕೋರ್ಟ್ ನಿರ್ದೇಶ

Update: 2018-09-23 15:55 GMT

ಹೊಸದಿಲ್ಲಿ,ಸೆ.23: ಸಾಗರೋತ್ತರ ಭಾರತೀಯ ಪ್ರಜೆ(ಒಸಿಐ) ಕಾರ್ಡ್ ಹೊಂದಿರುವವರು ಅಥವಾ ವಿದೇಶಿಯರನ್ನು ಕಪ್ಪುಪಟ್ಟಿಗೆ ಸೇರಿಸುತ್ತಿರುವ ಬಗ್ಗೆ ಅವರಿಗೆ ಮೊದಲೇ ಮಾಹಿತಿಯನ್ನು ನೀಡದಿರುವ ಭಾರತೀಯ ಅಧಿಕಾರಿಗಳ ಆತಂಕಕಾರಿ ಮತ್ತು ಅಸಮಂಜಸ ಪದ್ಧತಿಗೆ ಅಸಮ್ಮತಿಯನ್ನು ವ್ಯಕ್ತಪಡಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು, ದೇಶದಲ್ಲಿ ಪ್ರವೇಶವನ್ನು ನಿರಾಕರಿಸಲಾಗುತ್ತದೆ ಎನ್ನುವುದನ್ನು ಇಂತಹ ವ್ಯಕ್ತಿಗಳಿಗೆ ಮೊದಲೇ ತಿಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶವನ್ನು ನೀಡಿದೆ.

ವಿದೇಶಿಯರು ಮತ್ತು ಒಸಿಐಗಳು ಇಲ್ಲಿಗೆ ಬಂದಾಗ ಅವರಿಗೆ ಭಾರತ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಉಚ್ಚ ನ್ಯಾಯಾಲಯದಲ್ಲಿ ಬಹಳಷ್ಟು ಪ್ರಕರಣಗಳು ದಾಖಲಾಗುತ್ತಿವೆ ಎಂದು ಹೇಳಿದ ನ್ಯಾ.ವಿಭು ಭಾಖ್ರು ಅವರು,ಸೂಕ್ತ ವೀಸಾ ಹೊಂದಿದ್ದರೂ ತಮ್ಮನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂಬ ಯಾವುದೇ ಪೂರ್ವ ಮಾಹಿತಿ ಅವರಿಗೆ ಇರಲಿಲ್ಲ ಎನ್ನುವುದು ಇಂತಹ ಪ್ರತಿಯೊಂದೂ ಪ್ರಕರಣದಲ್ಲಿಯ ಅತಂಕಕಾರಿ ಅಂಶವಾಗಿದೆ ಎಂದು ಹೇಳಿದರು.

ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು ದೇಶದಲ್ಲಿ ಪ್ರವೇಶವನ್ನು ನಿರಾಕರಿಸಲಾಗುವುದು ಎಂದು ಸಂಬಂಧಿತ ವಿದೇಶಿಯರು ಮತ್ತು ಒಸಿಐಗಳಿಗೆ ಮಾಹಿತಿ ನೀಡುವಂತೆ ಕಪ್ಪುಪಟ್ಟಿಗೆ ಸೇರಿಸುವ ಆದೇಶಗಳನ್ನು ಹೊರಡಿಸುವ ಎಲ್ಲ ಅಧಿಕಾರಿಗಳಿಗೆ ಅಗತ್ಯ ನಿರ್ದೇಶಗಳನ್ನು ಹೊರಡಿಸುವಂತೆ ನ್ಯಾಯಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಆದೇಶಿಸಿದೆ.

ಒಸಿಐ ಆಗಿರುವ ಅಮೆರಿಕದ ನಿವಾಸಿ ಡಾ.ನರೇಶ ಸತ್ಯನಾರಾಯಣ ಕುಮಾರ್ ಅವರು ಅಮೃತಸರದಲ್ಲಿ ವೈದ್ಯಕೀಯ ಸಮ್ಮೇಳನವೊಂದರಲ್ಲಿ ಪ್ರಧಾನ ಉಪನ್ಯಾಸ ನೀಡಲೆಂದು ಆಹ್ವಾನದ ಮೇರೆಗೆ ತಮ್ಮ ಪತ್ನಿಯೊಂದಿಗೆ ಆ.8ರಂದು ಭಾರತಕ್ಕೆ ಆಗಮಿಸಿದ್ದರು. ಆದರೆ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅವರಿಗೆ ದೇಶದೊಳಗೆ ಪ್ರವೇಶವನ್ನು ನಿರಾಕರಿಸಿದ್ದರು. ಈ ಬಗ್ಗೆ ಅವರ ಪತ್ನಿ ಹೈಕೋರ್ಟ್ ಮೆಟ್ಟಿಲನ್ನೇರಿದ್ದರು.

ಚೆನ್ನೈನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯು 2018,ಮಾ.5ರಂದು ಡಾ.ಕುಮಾರ್ ಅವರನ್ನು ಕಪ್ಪುಪಟ್ಟಿಗೆ ಸೇರಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಕೇಂದ್ರದ ಸ್ಥಾಯಿ ವಕೀಲ ಜಸ್ಮೀತ್ ಸಿಂಗ್ ಅವರು,ಈ ಸಂಬಂಧ ವಿವರಗಳನ್ನು ಪಡೆದುಕೊಳ್ಳಲು ಕಾಲಾವಕಾಶ ಕೋರಿದರು.

ಕುಮಾರ್ ಅವರನ್ನು ಕಪ್ಪುಪಟ್ಟಿಗೆ ಸೇರಿಸಿರುವ ಆದೇಶಕ್ಕೆ ಸಂಬಂಧಿಸಿದ ಕಡತವನ್ನು ತನಗೆ ಸಲ್ಲಿಸುವಂತೆ ತಿಳಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಅ.11ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News