ಅಮಿತಾಬ್ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ರಾಜೀವ್‌ಗಾಂಧಿಯನ್ನು ಎಚ್ಚರಿಸಿದ್ದ ಇಂದಿರಾ

Update: 2018-09-23 16:07 GMT

ಹೊಸದಿಲ್ಲಿ, ಸೆ.23: ತಮ್ಮ ಕುಟುಂಬದೊಂದಿಗೆ ಆತ್ಮೀಯರಾಗಿದ್ದ ಮತ್ತು ಪುತ್ರ ರಾಜೀವ್ ಗಾಂಧಿಯ ನಿಕಟ ಮಿತ್ರನಾಗಿದ್ದ ಹಿಂದಿ ಸಿನಿಮಾ ರಂಗದ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ರಾಜಕೀಯ ಕ್ಷೇತ್ರ ಪ್ರವೇಶಿಸುವುದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ಇಷ್ಟವಿರಲಿಲ್ಲ ಎಂದು ರಾಜೀವ್‌ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಎಂ.ಎಲ್.ಪೋತೆದಾರ್ ಹೇಳಿದ್ದಾರೆ. ರಶೀದ್ ಕಿದ್ವಾಯಿ ಬರೆದಿರುವ ‘ನೇತಾ ಅಭಿನೇತಾ: ಬಾಲಿವುಡ್ ಸ್ಟಾರ್ ಪವರ್ ಇನ್ ಇಂಡಿಯನ್ ಪೊಲಿಟಿಕ್ಸ್’ ಎಂಬ ಪುಸ್ತಕದಲ್ಲಿ ಈ ಕುರಿತ ವಿವರವಿದೆ. 

1984ರ ಅಕ್ಟೋಬರ್ 31ರಂದು ಇಂದಿರಾಗಾಂಧಿಯವರ ಹತ್ಯೆಯಾಗಿತ್ತು. ಇದಕ್ಕೆ ಕೆಲ ದಿನಗಳ ಮೊದಲು ಆಗ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ತನ್ನ ಪುತ್ರ ರಾಜೀವ್ ಗಾಂಧಿಯವರ ಜೊತೆ ಮುಂಬರುವ ಚುನಾವಣೆಯ ಕುರಿತು ಚರ್ಚೆ ನಡೆಸುತ್ತಿದ್ದ ಸಂದರ್ಭ ಇಂದಿರಾ, ಯಾವತ್ತೂ ತೇಜಿ ಬಚ್ಚನ್ ಪುತ್ರ ಅಮಿತಾಬ್ ಬಚ್ಚನ್‌ನ ರಾಜಕೀಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಡ ಎಂದು ಎಚ್ಚರಿಸಿದ್ದರು. ಆಗ ಪೋತೆದಾರ್ ಕೂಡಾ ಅಲ್ಲಿದ್ದರು ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ ಮಾಧವರಾವ್ ಸಿಂಧಿಯಾರನ್ನು ಸುರಕ್ಷಿತ ಅಂತರದಲ್ಲಿ ಇರಿಸಿಕೊಳ್ಳುವಂತೆ ಕೂಡಾ ಇಂದಿರಾ ಪುತ್ರನಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ ತಾಯಿಯ ಮಾತನ್ನು ಕೇಳಿಸಿಕೊಂಡ ರಾಜೀವ್ ತುಟಿ ಬಿಚ್ಚಲಿಲ್ಲ. ಬಳಿಕ ಇಂದಿರಾ ಹತ್ಯೆಯಾಯಿತು. ನಂತರದ ಚುನಾವಣೆಯಲ್ಲಿ ಅಮಿತಾಬ್‌ಗೆ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಟಿಕೆಟು ನೀಡಲಾಯಿತು ಮತ್ತು ಅವರು ಗೆದ್ದರು. ಆಗ ವಾಜಪೇಯಿ, ಎಚ್.ಎನ್.ಬಹುಗುಣರಂತಹ ಘಟಾನುಘಟಿಗಳ ಎದುರು ಜನಪ್ರಿಯ ಯುವನಾಯಕನೊಬ್ಬ ಸ್ಪರ್ಧಿಸಬೇಕು ಎಂಬ ಆಶಯ ರಾಜೀವ್ ಗಾಂಧಿಯವ ರ ಮನದಲ್ಲಿ ಇದ್ದಿರಬಹುದು ಎಂದು ಪೋತೆದಾರ್ ಹೇಳಿದ್ದಾರೆ.

 ಸಂಸತ್ ಸದಸ್ಯನಾಗಿ ಸುಮಾರು 2 ವರ್ಷದ ಅವಧಿಯಲ್ಲಿ (1985-87) ಅಮಿತಾಬ್ ಹಲವಾರು ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಸಚಿವರು ಆಕ್ಷೇಪಿಸುತ್ತಿದ್ದರು. ಸಚಿವಾಲಯದ ಅಧಿಕಾರಿಗಳ ನೇಮಕ ಅಥವಾ ವರ್ಗಾವಣೆಯಲ್ಲಿ ಅಮಿತಾಬ್ ಹಸ್ತಕ್ಷೇಪದ ಬಗ್ಗೆ ತನಗೆ ಹಲವಾರು ದೂರುಗಳು ಬಂದಿದ್ದವು ಎಂದು ಪೋತೆದಾರ್ ತಿಳಿಸಿದ್ದಾರೆ. ಆಗ ಕಾಂಗ್ರೆಸ್ ಆಡಳಿತವಿದ್ದ ಉತ್ತರಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಸರಕಾರದ ಕಾರ್ಯನಿರ್ವಹಣೆಯಲ್ಲೂ ಅಮಿತಾಬ್ ಮೂಗು ತೂರಿಸುತ್ತಿದ್ದರು ಎಂಬ ದೂರು ಬಂದಿದ್ದರೂ ಇದನ್ನು ರಾಜೀವ್ ಗಾಂಧಿಯವರಿಗೆ ತಾನು ತಲುಪಿಸಿರಲಿಲ್ಲ ಎನ್ನುತ್ತಾರೆ ಪೋತೆದಾರ್. 1987ರಲ್ಲಿ ರಾಜೀವ್ ಮತ್ತು ಅಮಿತಾಬ್ ನಡುವಿನ ಸ್ನೇಹ ಸಂಬಂಧ ಹಳಸಿದಾಗ ಅಮಿತಾಬ್ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ರಾಜೀನಾಮೆ ನೀಡುವ ಮೊದಲು ಪ್ರಧಾನಿ ರಾಜೀವ್‌ಗಾಂಧಿಯವರ ನಿವಾಸಕ್ಕೆ ಅಮಿತಾಭ್ ಆಗಮಿಸಿದ್ದು ಅಲ್ಲಿ ಕೆಲ ಹೊತ್ತು ಇಬ್ಬರ ಮಧ್ಯೆ ಮಾತುಕತೆ ನಡೆದಿದೆ. ಬಳಿಕ ರಾಜೀವ್ ತಮ್ಮ ರಾಜಕೀಯ ಕಾರ್ಯದರ್ಶಿ ಪೋತೆದಾರ್‌ರನ್ನೂ ಕರೆಸಿಕೊಂಡಿದ್ದಾರೆ. ನಂತರ ಅಮಿತಾಬ್‌ರತ್ತ ತಿರುಗಿ- ನೀವು ರಾಜೀನಾಮೆ ನೀಡಬೇಕೆಂದು ಪೋತೆದಾರ್‌ಜಿ ಹೇಳುತ್ತಿದ್ದಾರೆ ಎಂದರು. ಪೋತೆದಾರ್‌ಜಿ ನನ್ನ ರಾಜೀನಾಮೆ ಕೇಳುತ್ತಾರೆಂದರೆ ನಾನು ಈಗಲೇ ನೀಡಲು ಸಿದ್ದ, ಎಲ್ಲಿ ಒಂದು ಪೇಪರ್ ತನ್ನಿ ಎಂದರು ಅಮಿತಾಬ್. ನಿಮ್ಮ ಕೈಯಲ್ಲಿ ಸ್ಪೀಕರ್‌ರನ್ನು ಉದ್ದೇಶಿಸಿ ರಾಜೀನಾಮೆ ಪತ್ರ ಬರೆದುಕೊಡಿ ಎಂದು ಪೋತೆದಾರ್ ಹೇಳಿದಾಗ ಅದರಂತೆ ಅಮಿತಾಬ್ ಬರೆದುಕೊಟ್ಟರು. ಆದರೆ ನಿಜಕ್ಕೂ ಈ ವಿಷಯದ ಕುರಿತು ತಾನು ರಾಜೀವ್‌ರೊಂದಿಗೆ ಮಾತಾಡಿರಲಿಲ್ಲ, ಅಥವಾ ಅವರು ತನ್ನೊಂದಿಗೆ ಮಾತಾಡಿರಲಿಲ್ಲ. ಆದರೆ ಅವರು ತನ್ನ ಹೆಸರು ಯಾಕೆ ಹೇಳಿದರೆಂದು ಅರ್ಥವಾಗಲಿಲ್ಲ ಎಂದು ಪೋತೆದಾರ್ ಹೇಳಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಏಕಾಏಕಿ ಪ್ರಸಿದ್ಧಿಗೆ ಬಂದ ಅಮಿತಾಬ್ ಹೆಸರು ಅಷ್ಟೇ ಕ್ಷಿಪ್ರವಾಗಿ ತೆರೆಮರೆಗೆ ಸರಿಯಿತು ಎಂದು ಪೋತೆದಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News