ವಿಚಾರವಾದಿಗಳ ಹತ್ಯೆಗಳು: ಸನಾತನ ಸಂಸ್ಥಾವನ್ನು ಸಮರ್ಥಿಸಿಕೊಂಡ ಎಂಜಿಪಿ

Update: 2018-09-23 16:12 GMT

ಪಣಜಿ,ಸೆ.23: ಗೋವಾದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ(ಎಂಜಿಪಿ)ಯು, ವಿಚಾರವಾದಿಗಳು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಹತ್ಯೆಗಳಲ್ಲಿ ಸನಾತನ ಸಂಸ್ಥಾ ಭಾಗಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದೆ.

ಸನಾತನ ಸಂಸ್ಥಾ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದರಿಂದ ಕೆಲವು ಜನರು ಅದನ್ನು ‘ತಪ್ಪುಗಾರ ’ಎಂದು ಬಿಂಬಿಸಲು ಬಯಸಿದ್ದಾರೆ. ಅದರ ವಿರುದ್ಧ ಈ ದಾಳಿ ಮುಂದುವರಿಯಲಿದೆ ಎಂದು ಹೇಳಿದ ರಾಜ್ಯದ ಸಚಿವ ಹಾಗೂ ಎಂಜಿಪಿ ಅಧ್ಯಕ್ಷ ದಿಲೀಪ ಧಾವಳಿಕರ ಅವರು,ಇದೇ ವೇಳೆ ಇಂತಹ ಹತ್ಯೆಗಳನ್ನು ಖಂಡಿಸಿದರು.

 ಸನಾತನ ಸಂಸ್ಥಾ ಇಂದಿನ ಜಗತ್ತಿಗೆ ಅತ್ಯಂತ ಮುಖ್ಯವಾಗಿರುವ ಆಧ್ಯಾತ್ಮಿಕತೆಯನ್ನು ಬೋಧಿಸುತ್ತಿದೆ ಎಂದ ಅವರು,ಇಂತಹ ಹತ್ಯೆಗಳು ನಡೆಯಬಾರದು. ಕುಟುಂಬದ ಓರ್ವ ಸದಸ್ಯ ಯಾವುದೋ ಅಪರಾಧವನ್ನು ಮಾಡಿದ್ದಾನೆಂಬ ಮಾತ್ರಕ್ಕೆ ಇಡೀ ಕುಟುಂಬವನ್ನು ಕೆಟ್ಟದ್ದು ಎಂಬ ಹಣೆಪಟ್ಟಿಯನ್ನು ಹಚ್ಚುವಂತಿಲ್ಲ ಎಂದು ಅವರು ಹೇಳಿದರು.

ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್,ಗೋವಿಂದ ಪನ್ಸಾರೆ, ಎಂ.ಎಂ.ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಗಳಲ್ಲಿ ಸನಾತನ ಸಂಸ್ಥಾದ ಕಾರ್ಯಕರ್ತರು ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಉತ್ತರ ಗೋವಾದ ರಾಮನಾಥಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸನಾತನ ಸಂಸ್ಥಾ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News