ಮುಸ್ಲಿಮರ ಗಡ್ಡ, ಟೋಪಿಯನ್ನು ನಿಷೇಧಿಸಿದ್ದ ಹರ್ಯಾಣ ಗ್ರಾಮಸ್ಥರು

Update: 2018-09-23 17:01 GMT
ಸಾಂದರ್ಭಿಕ ಚಿತ್ರ

ರೋಹ್ಟಕ್,ಸೆ.23: ರೋಹ್ಟಕ್ ಜಿಲ್ಲೆಯ ಟಿಟೋಲಿ ಗ್ರಾಮ ಪಂಚಾಯತ್ ಗ್ರಾಮದಲ್ಲಿಯ ಮುಸ್ಲಿಮರು ಗಡ್ಡ ಬಿಡುವುದನ್ನು ಮತ್ತು ಟೋಪಿ ಧರಿಸುವುದ್ನು ನಿಷೇಧಿಸಿ ಮಂಗಳವಾರ ಆದೇಶವನ್ನು ಹೊರಡಿಸಿದ್ದು, ಮರುದಿನ ಸ್ಥಳೀಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ತನ್ನ ಆದೇಶವನ್ನು ಹಿಂದೆಗೆದುಕೊಂಡಿದೆ. ಅಲ್ಲದೆ ಮುಸ್ಲಿಮರು ಗ್ರಾಮದ ಗಡಿಯ ಹೊರಗೆ ಮಾತ್ರ ನಮಾಝ್ ಮಾಡಬಹುದು ಎಂದೂ ಅದು ತನ್ನ ಆದೇಶದಲ್ಲಿ ತಿಳಿಸಿತ್ತು.

ಮುಸ್ಲಿಂ ಸಮುದಾಯದವರು ಕರುವೊಂದನ್ನು ಕೊಂದಿದ್ದಾರೆ ಎಂದು ಗ್ರಾಮದಲ್ಲಿ ಬಹುಸಂಖ್ಯಾತರಾಗಿರುವ ಜಾಟ್ ಸಮುದಾಯದವರು ಆರೋಪಿಸಿದ ಬಳಿಕ ಆ.22ರಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿತ್ತು. ದೊಣ್ಣೆಯಿಂದ ಹೊಡೆದು ಕರುವನ್ನು ಓಡಿಸುತ್ತಿದ್ದಾಗ ಅದು ಆಕಸ್ಮಿಕವಾಗಿ ಸಾವನ್ನಪ್ಪಿದೆ ಎಂದು ಪೊಲೀಸರು ಹೇಳಿದ್ದರಾದರೂ,ಈದ್‌ಗಾಗಿ ಅದನ್ನು ಕೊಲ್ಲಲಾಗಿತ್ತು ಎಂದು ಹಲವಾರು ಗ್ರಾಮಸ್ಥರು ಆರೋಪಿಸಿದ್ದರು.

ಬಳಿಕ ಗ್ರಾಮದ ಎರಡೂ ಸಮುದಾಯಗಳ ಮುಖಂಡರು ಸಭೆ ಸೇರಿ ಶಾಂತಿಯನ್ನು ಮರುಸ್ಥಾಪಿಸಿದ್ದರಾದರೂ ಮಂಗಳವಾರ ಪಂಚಾಯತ್ ಸಭೆಯಲ್ಲಿ ಗಡ್ಡ ಮತ್ತು ಟೋಪಿಯನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಖಬರ್‌ಸ್ತಾನವನ್ನು ಗ್ರಾಮದಿಂದ ಒಂದು ಕಿ.ಮೀ.ದೂರಕ್ಕೆ ಸ್ಥಳಾಂತರಿಸಲು ಸಹ ನಿರ್ಧರಿಸಲಾಗಿದ್ದು,ಇದನ್ನು ಮುಸ್ಲಿಂ ಸಮುದಾಯವು ಒಪ್ಪಿಕೊಂಡಿತ್ತು. ಮುಸ್ಲಿಂ ಸಮುದಾಯವು ಹೇಳುವಂತೆ ತನ್ನ ಅತ್ತಿಗೆ ಮತ್ತು ಸರಪಂಚ ಪ್ರಮಿಳಾ ದೇವಿಯ ಪರವಾಗಿ ಸುರೇಶ ಕುಮಾರ ನಿರ್ವಹಿಸುತ್ತಿರುವ ಪಂಚಾಯತ್ ಗ್ರಾಮದಲ್ಲಿ ಸುಮಾರು 100 ಮನೆಗಳನ್ನು ಹೊಂದಿರುವ ಮುಸ್ಲಿಮರು ಹಿಂದು ಸಂಪ್ರದಾಯಗಳು ಮತ್ತು ವಿಧಿಗಳನ್ನು ಅನುಸರಿಸಬೇಕೆಂದು ನಿರ್ಧರಿಸಿತ್ತು.

ತಮಗೆ ಶಾಂತಿಯಿಂದ ಬದುಕಬೇಕಿದೆ,ಹೀಗಾಗಿ ಪಂಚಾಯತ್ ನಿರ್ಧಾರಗಳಿಗೆ ತಮ್ಮ ಆಕ್ಷೇಪವಿಲ್ಲ ಎಂದು ಮುಸ್ಲಿಂ ಸಮುದಾಯದ ಮುಖಂಡ ರಾಜಬೀರ್ ಖೋಖರ್ ತಿಳಿಸಿದರು.

ಆದರೆ ಮುಸ್ಲಿಂ ಸಮುದಾಯದ ವಿರುದ್ಧ ಯಾವುದೇ ನಿಷೇಧವನ್ನು ವಿಧಿಸಿದ್ದನ್ನುಸುರೇಶ ಕುಮಾರ ನಿರಾಕರಿಸಿದ್ದು,ಖಬರಸ್ತಾನದ ಆಸುಪಾಸಿನಲ್ಲಿ ಹಲವಾರು ಮನೆಗಳಿರುವುದರಿಂದ ಅದನ್ನು ಗ್ರಾಮದ ಹೊರಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕವೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News