ಗೋವಾ ಮುಖ್ಯಮಂತ್ರಿಯಾಗಿ ಪಾರಿಕ್ಕರ್ ಮುಂದುವರಿಕೆ: ಅಮಿತ್ ಶಾ

Update: 2018-09-23 16:28 GMT

ಪಣಜಿ,ಸೆ.23: ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ಮನೋಹರ್ ಪಾರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಆದರೆ ಶೀಘ್ರದಲ್ಲಿ ಸಂಪುಟ ಪುನರ್‌ರಚನೆ ಮಾಡಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರವಿವಾರ ತಿಳಿಸಿದ್ದಾರೆ. ಮಹಾರಾಷ್ಟ್ರ ಗೋಮಂತಕ ಪಕ್ಷ (ಎಂಜಿಪಿ)ದ ಸಚಿವರನ್ನು ಪರಿಕ್ಕರ್ ಅವರ ಸಹಾಯಕರಾಗಿ ನೇಮಿಸಲು ರಾಜ್ಯದಲ್ಲಿನ ಬಿಜೆಪಿ ಮಿತ್ರಪಕ್ಷಗಳು ನಿರಾಕರಿಸಿದ ಪರಿಣಾಮ ಗೋವಾ ಸಂಪುಟ ಪುನರ್‌ರಚಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

62ರ ಹರೆಯದ ಪಾರಿಕ್ಕರ್ ಅನಾರೋಗ್ಯಪೀಡಿತರಾಗಿ ಹುದ್ದೆಯಿಂದ ದೂರವುಳಿದಿರುವ ಕಾರಣ ಸರಕಾರ ರಚಿಸಲು ಅವಕಾಶ ನೀಡಬೇಕೆಂದು ಕಾಂಗ್ರೆಸ್ ಪಕ್ಷ ರಾಜ್ಯಪಾಲರ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಗೋವಾದಲ್ಲಿ ಪರಿಸ್ಥಿತಿ ನಿಬಾಯಿಸಲು ಕಾರ್ಯೋನ್ಮುಖರಾಗಿದ್ದಾರೆ. ಎಂಜಿಪಿ ಸಚಿವ ಸುಧಿನ್ ಧವಲಿಕರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಸ್ವೀಕರಿಸಲು ಬಿಜೆಪಿಯ ಮಿತ್ರಪಕ್ಷಗಳು ನಿರಾಕರಿಸಿರುವ ಹಿನ್ನೆಲೆಯಲ್ಲಿ ಗೋವಾ ಫಾರ್ವರ್ಡ್ ಪಕ್ಷ ವಿಜಯ್ ಸರ್ದೇಸಾಯಿ ಜೊತೆ ಶಾ ಮಾತುಕತೆ ನಡೆಸಿರುವುದಾಗಿ ವರದಿಗಳು ತಿಳಿಸಿವೆ. ಪಾರಿಕ್ಕರ್ ಮರಳುವವರೆಗೆ ಇದಕ್ಕೊಂದು ದೀರ್ಘಾವಧಿ ಪರಿಹಾರವನ್ನು ಒದಗಿಸಬೇಕು ಎಂದು ಮಿತ್ರಪಕ್ಷಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿ ರಾಮ ಲಾಲ್, ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಮತ್ತು ಕೇಂದ್ರದ ರಾಜ್ಯ ಸಚಿವ ಶ್ರೀಪಾದ ನಾಕ್‌ರ ತಂಡವನ್ನು ರಾಜ್ಯದಲ್ಲಿ ಪರಿಸ್ಥಿತಿ ಅವಲೋಕಿಸಲು ಅಮಿತ್ ಶಾ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News