ಆಯುಷ್ಮಾನ್ ಭಾರತ್ ಲೋಕಾರ್ಪಣೆ: ನಿಮಗೆ ತಿಳಿದಿರಬೇಕಾದ ಪ್ರಮುಖ ಮಾಹಿತಿಗಳು

Update: 2018-09-23 16:32 GMT

► 10 ಕೋಟಿ ಕುಟುಂಬಕ್ಕೆ ಆರೋಗ್ಯ ಸೇವೆ ನೀಡುವ ಉದ್ದೇಶ

►  ಸಾಮಾಜಿಕ-ಆರ್ಥಿಕ ಜಾತಿ ಸಮೀಕ್ಷೆ ದತ್ತಾಂಶದಲ್ಲಿನ ಬಡತನದ ಮಾನದಂಡ ಆಧರಿಸಿ ಫಲಾನುಭವಿಗಳ ಆಯ್ಕೆ.

►  ಮಾಹಿತಿಗೆ ವೆಬ್‌ಸೈಟ್ mera.pmjay.gov.in ಹಾಗೂ ಸಹಾಯವಾಣಿ ಸಂಖ್ಯೆ 14555

ರಾಂಚಿ, ಸೆ. 22: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ-ಆಯುಷ್ಮಾನ್ ಭಾರತ್ ಅನ್ನು ಜಾರ್ಖಂಡಲ್ಲಿ ರವಿವಾರ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಬಡಜನರಿಗೆ ಸೇವೆ ನೀಡುವ ದಿಕ್ಕನ್ನೇ ಬದಲಿಸಿದೆ ಎಂದಿದ್ದಾರೆ. ರವಿವಾರದಿಂದಲೇ ಯೋಜನೆ ಅಸ್ತಿತ್ವಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ‘‘ಪಿಎಂಜೆಎವೈ-ಆಯುಷ್ಮಾನ್ ಭಾರತ್ ಜಗತ್ತಿನಲ್ಲೇ ಅತಿ ದೊಡ್ಡ ಸರಕಾರ ಪ್ರಾಯೋಜಿತ ಆರೋಗ್ಯ ಸೇವೆ ಯೋಜನೆ. ಇದರ ಫಲಾನುಭವಿಗಳ ಸಂಖ್ಯೆ ಕೆನಡಾ, ಮೆಕ್ಸಿಕೊ, ಹಾಗೂ ಅಮೆರಿಕದ ಜನರ ಒಟ್ಟು ಜನರ ಸಂಖ್ಯೆಗೆ ಸರಿಸುಮಾರು ಸಮ.’’ ಎಂದು ಮೋದಿ ಹೇಳಿದ್ದಾರೆ. ಸ್ಪಷ್ಟವಾಗಿ ಕಾಂಗ್ರೆಸ್ ಅನ್ನು ಉಲ್ಲೇಖಿಸಿದ ಅವರು, ಬಡವರನ್ನು ಸಬಲೀಕರಣಗೊಳಿಸದ ಈ ಹಿಂದಿನ ಸರಕಾರ ಮತ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿಕೊಂಡಿತ್ತು. ಈ ಯೋಜನೆ ಅವರನ್ನು ಸಬಲೀಕರಿಸುವ ಬಿಜೆಪಿ ಸರಕಾರದ ಪ್ರಯತ್ನ ಎಂದರು. ಈ ಯೋಜನೆ 1300ಕ್ಕೂ ಅಧಿಕ ರೋಗಗಳಿಗೆ ಚಿಕಿತ್ಸೆ ನೀಡುವ ವ್ಯಾಪ್ತಿ ಹೊಂದಿದೆ. ಇದರಲ್ಲಿ ಹೃದ್ರೋಗ, ಮೂತ್ರಕೋಶ, ಪಿತ್ತಕೋಶ ಅಸ್ವಸ್ಥತೆ ಹಾಗೂ ಸಕ್ಕರೆ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಒಳಗೊಂಡಿದೆ ಎಂದು ಪ್ರಧಾನಿ ಹೇಳಿದರು. ಜನರು ಈ ಯೋಜನೆಯನ್ನು ಮೋದಿ ಕೇರ್ ಅಥವಾ ಇತರ ಹೆಸರುಗಳಿಂದ ಕರೆಯುತ್ತಿದ್ದಾರೆ. ಆದರೆ, ನನಗೆ ಇದು ಜನರ ಸೇವೆ ಮಾಡುವ ಒಂದು ಅವಕಾಶ. ಈ ಯೋಜನೆಯಿಂದ ಸಮಾಜದ ಅತಿ ದುರ್ಬಲರಿಗೆ ನೆರವಾಗಲಿದೆ ಎಂದು ಅವರು ತಿಳಿಸಿದರು. ಯೋಜನೆ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಂಡವನ್ನು ಅಭಿನಂದಿಸಿದ ಪ್ರಧಾನಿ, ಅಧಿಕಾರಿಗಳು 50 ಕೋಟಿ ಫಲಾನುಭವಿಗಳ ಆಶೀರ್ವಾದ ಪಡೆಯಲಿದ್ದಾರೆ ಎಂದರು.

‘‘ಬಡವರು ಆಸ್ಪತ್ರೆಗೆ ಭೇಟಿ ನೀಡಬಾರದು ಎಂದು ನಾನು ಬಯಸುತ್ತೇನೆ ಹಾಗೂ ಪ್ರಾರ್ಥಿಸುತ್ತೇನೆ. ಆದರೆ, ಭೇಟಿ ನೀಡುವ ಅನಿವಾರ್ಯತೆ ಒದಗಿ ಬಂದರೆ, ಆಯುಷ್ಮಾನ್ ಅವರ ಸೇವೆಗೆ ಇರುತ್ತದೆ. ಶ್ರೀಮಂತರ ಪಡೆಯುವ ಎಲ್ಲ ಸೌಲಭ್ಯಗಳನ್ನು ಬಡವರು ಕೂಡ ಪಡೆಯಬೇಕು’’ ಎಂದು ಅವರು ಹೇಳಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ (ಎಲ್ಲರೊಂದಿಗೆ ಎಲ್ಲರ ವಿಕಾಸ) ಘೋಷಣೆಯನ್ನು ಮರು ಉಚ್ಚರಿಸಿದ ಅವರು, ಆಯುಷ್ಮಾನ್ ಯೋಜನೆಯು ಧರ್ಮ, ಜಾತಿ, ಸ್ಥಳವನ್ನು ಆಧರಿಸಿ ಜನರನ್ನು ಪ್ರತ್ಯೇಕಿಸುವುದಿಲ್ಲ. ಅರ್ಹ ಎಲ್ಲ ವ್ಯಕ್ತಿಗಳಿಗೂ ಸೌಲಭ್ಯ ದೊರಕಲಿದೆ ಎಂದರು.

 ಈ ಯೋಜನೆಗೆ ಯಾರೊಬ್ಬರೂ ನೋಂದಣಿ ಮಾಡುವ ಅಗತ್ಯತೆ ಇಲ್ಲ. ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ಪೂರೈಸಲಾಗುತ್ತಾದೆ. ಯೋಜನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉಚಿತ ದೂರವಾಣಿ ಕರೆ ಸಂಖ್ಯೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಆಯುಷ್ಮಾನ್  ಯೋಜನೆಯ ಮುಖ್ಯಾಂಶಗಳು

50 ಕೋಟಿ ಜನರನ್ನು ತಲುಪಲು ಉದ್ದೇಶಿಸಲಾಗಿರುವ ಈ ಯೋಜನೆಯು ಗ್ರಾಮೀಣ ಪ್ರದೇಶ 8.03 ಕೋಟಿ ಮತ್ತು ನಗರ ಪ್ರದೇಶದಲ್ಲಿ ವಾಸಿಸುವ 2.33 ಕೋಟಿ ಕಾರ್ಮಿಕ ಕ್ಷೇತ್ರದಲ್ಲಿ ದುಡಿಯುವ ಬಡ, ವಂಚಿತ ಕುಟುಂಬಗಳನ್ನು ಒಳಗೊಳ್ಳಲಿದೆ. ಇತ್ತೀಚಿನ ಸಾಮಾಜಿಕ ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ) ಅಂಕಿಅಂಶದ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ನಗರ ಪ್ರದೇಶಗಳಲ್ಲಿ ಹನ್ನೊಂದು ಔದ್ಯೋಗಿಕ ವಿಭಾಗಗಳಲ್ಲಿ ದುಡಿಯುವ ಜನರಿಗೆ ಈ ಯೋಜನೆ ಅನ್ವಯಿಸುತ್ತದೆ. ಈ ಯೋಜನೆಯಲ್ಲಿ ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ನಿಗದಿಪಡಿಸಲಾಗಿಲ್ಲ. ಆಧಾರ್ ಕಾರ್ಡ್, ಚುನಾವಣಾ ಗುರುತಿನ ಪತ್ರ ಅಥವಾ ರೇಶನ್ ಕಾರ್ಡ್ ಮೂಲಕ ಜನರು ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

ಈ ಯೋಜನೆಗೆ ಆಧಾರ್ ಕಡ್ಡಾಯವಾಗಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಹೆಸರಿಸಲಾಗಿರುವ ಖಾಸಗಿ ಆಸ್ಪತ್ರೆಗಳು ಮತ್ತು ಸರಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಹೊಸ ಜಾಲತಾಣ ಮತ್ತು ಸಹಾಯವಾಣಿಯನ್ನು ಆರಂಭಿಸಿದ್ದು, ತಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆಯೇ ಎಂಬುದನ್ನು ಫಲಾನುಭವಿಗಳು ಪರಿಶೀಲಿಸಬಹುದಾಗಿದೆ. ಯೋಜನೆಯಲ್ಲಿ ಹೆಸರಿಸಲಾಗಿರುವ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಮಾರ್ಗದರ್ಶನ ನೀಡಲು ಆಯುಷ್ಮಾನ್ ಮಿತ್ರ ಎಂಬ ವಿಭಾಗವನ್ನು ತೆರೆಯಲಾಗುತ್ತದೆ. ಈ ಯೋಜನೆಯಡಿಯಲ್ಲಿ ಬೈಪಾಸ್ ಸರ್ಜರಿ, ಮೊಣಗಂಟು ಬದಲಾವಣೆ ಸ್ಟೆಂಟ್ ಅಳವಡಿಕೆ ಹಾಗೂ ಇತರ ಹಲವು ಚಿಕಿತ್ಸೆಗಳನ್ನು ಒದಗಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News