ಜಾರ್ಖಂಡ್‌ನ ಹೆಣ್ಣುಮಗು ಪಿಎಂಜೆಎವೈ ಯೋಜನೆಯ ಪ್ರಥಮ ಫಲಾನುಭವಿ

Update: 2018-09-24 16:05 GMT

ರಾಂಚಿ, ಸೆ.24: ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ(ಪಿಎಂಜೆಎವೈ)ಗೆ ನರೇಂದ್ರ ಮೋದಿ ರಾಂಚಿಯಲ್ಲಿ ಚಾಲನೆ ನೀಡಿದ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಯಲ್ಲಿ ಹೆಣ್ಣು ಶಿಶುವಿಗೆ ಜನ್ಮ ನೀಡಿದ ಪೂನಮ್ ಮಹತೊ ಈ ಯೋಜನೆಯ ಪ್ರಯೋಜನ ಪಡೆದ ಜಾರ್ಖಂಡ್‌ನ ಪ್ರಥಮ ಫಲಾನುಭವಿಯಾಗಿ ಗುರುತಿಸಿಕೊಂಡಿದ್ದಾರೆ.

ಜಮ್‌ಶೆಡ್‌ಪುರದ ಸದರ್ ಆಸ್ಪತ್ರೆಯಲ್ಲಿ ರವಿವಾರ ಮಧ್ಯಾಹ್ನ 1:10 ಗಂಟೆಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿದೆ. ಹೆರಿಗೆಯ ಖರ್ಚು 18,500 ರೂ.ಗಳಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಪಿಎಂಜೆಎವೈ ಪ್ರಕಾರ ಈ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರಕಾರ 60:40 ಪ್ರಮಾಣದಲ್ಲಿ ಭರಿಸುತ್ತವೆ. ಆಸ್ಪತ್ರೆಯಲ್ಲಿ ಆಹಾರ, ಔಷಧ, ಸಲಹೆ, ಪರೀಕ್ಷೆ ಮುಂತಾದವುಗಳನ್ನು ಉಚಿತವಾಗಿ ನಡೆಸಲಾಗಿದೆ. ಗಮರಿಯ ಪೊಲೀಸ್ ಠಾಣಾ ವ್ಯಾಪ್ತಿಯ ಬಸುರ್ದಾ ಗ್ರಾಮದ ನಿವಾಸಿ 24ರ ಹರೆಯದ ಪೂನಂರನ್ನು ರವಿವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಯಿ ಮತ್ತು ಶಿಶುವನ್ನು ಆಸ್ಪತ್ರೆಯಲ್ಲಿ ಒಂದು ವಾರ ಇರಿಸಿಕೊಳ್ಳಲಾಗುವುದು ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News