ಗೋವಾ ಸಂಪುಟದಿಂದ ಇಬ್ಬರು ಸಚಿವರಿಗೆ ಖೋಕ್

Update: 2018-09-24 16:10 GMT

ಪಣಜಿ, ಸೆ. 24: ಗೋವಾದ ಮನೋಹರ್ ಪಾರಿಕ್ಕರ್ ಸಂಪುಟದಿಂದ ಇಬ್ಬರು ಸಚಿವರನ್ನು ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಅವರ ಕಚೇರಿ ಸೋಮವಾರ ತಿಳಿಸಿದೆ. ಬಿಜೆಪಿಯ ಫ್ರಾನ್ಸಿಸ್ ಡಿಸೋಜಾ ಹಾಗೂ ಪಾಂಡುರಂಗ ಮೆಡ್‌ಕೈಕಾರ್ ಕೆಲವು ಸಮಯದಿಂದ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ.

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಪೇಂಕ್ರಿಯಾಸ್ ಕಾಯಿಲೆಗೆ ಸಂಬಂಧಿಸಿ ಹೊಸದಿಲ್ಲಿಯಲ್ಲಿರುವ ಎಐಐಎಂಎಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭ ಬೆಳವಣಿಗೆ ನಡೆದಿದೆ. ನಗರಾಡಳಿತ ಖಾತೆಯ ಸಚಿವರಾಗಿರುವ ಡಿ’ಸೋಜಾ ಹಾಗೂ ವಿದ್ಯುತ್ ಖಾತೆಯ ಸಚಿವರಾಗಿರುವ ಮಡ್‌ಕೈಕರ್ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಡಿ’ಸೋಜಾ ಅವರು ಪ್ರಸ್ತುತ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೂನ್‌ನಲ್ಲಿ ಮೆದುಳಿನ ಆಘಾತದಿಂದ ಅನಾರೋಗ್ಯಕ್ಕೀಡಾಗಿರುವ ಮಡ್‌ಕೈಕರ್ ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರಿಗೆ ಬದಲಾಗಿ ಬಿಜೆಪಿಯ ಇಬ್ಬರು ನಾಯಕರಾದ ನಿಲೇಶ್ ಕಬ್ರಾಲ್ ಹಾಗೂ ಮಿಲಿಂದ್ ನಾಯಕ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಸೋಮವಾರ 4 ಗಂಟೆಗೆ ಅವರು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಾಯಕ್ ಅವರು ಈ ಹಿಂದಿನ ಲಕ್ಷ್ಮೀಕಾಂತ್ ಪರ್ಸೇಕರ್ ನೇತೃತ್ವದ ಸಂಪುಟದಲ್ಲಿ ವಿದ್ಯುತ್ ಖಾತೆ ಸಚಿವರಾಗಿದ್ದರು. ಕಬ್ರಾಲ್ ಮೊದಲ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪಾರಿಕ್ಕಾರ್ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಹಾಗೂ ರಾಜ್ಯ ಸಚಿವರ ಪುನಾರಚನೆ ಶೀಘ್ರದಲ್ಲಿ ನಡೆಯಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರವಿವಾರ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News