ಪಿಎಚ್‌ಡಿ ಪ್ರವೇಶಕ್ಕೆ ನಕಲಿ ಅಂಕಪಟ್ಟಿ ಸಲ್ಲಿಸಿದ ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ: ಆರೋಪ

Update: 2018-09-24 18:20 GMT

ಹೊಸದಿಲ್ಲಿ, ಸೆ. 24: ಬೌದ್ಧ ಅಧ್ಯಯನ ವಿಬಾಗದಲ್ಲಿ ಪ್ರವೇಶ ಪಡೆಯಲು ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಅಕ್ಷಯ್ ಕುಮಾರ್ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪಿಎಚ್‌ಡಿ ಕೋರ್ಸ್‌ಗೆ ನೋಂದಣಿ ಮಾಡಿದ್ದ ಎಲ್ಲ ವಿದ್ಯಾರ್ಥಿಗಳ ಸ್ನಾತಕೋತ್ತರ ಪದವಿಯ ದಾಖಲೆಗಳನ್ನು ಜನವರಿಯಲ್ಲಿ ಪರಿಶೀಲನೆ ನಡೆಸುತ್ತಿರುವ ಸಂದರ್ಭ ಇದು ಬೆಳಕಿಗೆ ಬಂದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಷಯ್ ಕುಮಾರ್ ಅವರು ಇಂಗ್ಲೀಶ್ ಸಾಹಿತ್ಯದಲ್ಲಿನ ಸ್ನಾತಕೋತ್ತರ ಪದವಿಯ ನಕಲಿ ಅಂಕ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಾರ್ಚ್ 16ರಂದು ವೌರಿಸ್ ನಗರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

 2017 ಮಾರ್ಚ್‌ನಲ್ಲಿ ಪಿಎಚ್‌ಡಿ ಯೋಜನೆಗೆ ನೋಂದಣಿ ಮಾಡಿರುವುದಾಗಿ ತೋರಿಸುವ ಅಂಕ ಪಟ್ಟಿಗಳನ್ನು ಅಕ್ಷಯ್ ಕುಮಾರ್ ಸಲ್ಲಿಸಿದ್ದಾರೆ. ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಮಾನವ ಭಾರತಿ ವಿಶ್ವವಿದ್ಯಾನಿಲಯದ ಅಂಕಪಟ್ಟಿಯನ್ನು ಅವರು ಸಲ್ಲಿಸಿದ್ದಾರೆ. ಆದರೆ, ಈ ಅಂಕಪಟ್ಟಿಯನ್ನು ಮಾನವ ಭಾರತಿ ವಿ.ವಿ. ನಿರಾಕರಿಸಿದೆ ಎಂದು ಬೌದ್ಧ ಅಧ್ಯಯನದ ವಿಭಾಗ ನೀಡಿದ ದೂರಿನಲ್ಲಿ ತಿಳಿಸಿದೆ.

ಈಗ ಅಧಿಕಾರಿಗಳು ಕುಮಾರ್ ಅವರ ಪ್ರಕರಣವನ್ನು ಸಂಶೋಧನಾ ಅಧ್ಯಯನ ಮಂಡಳಿಗೆ ಕಳುಹಿಸಲು ಇಲಾಖೆಯ ಸಂಶೋಧನಾ ಸಮಿತಿಯ ಮುಂದಿರಿಸಿದೆ. ಇಂತಹ ಪ್ರಕರಣಗಳಲ್ಲಿ ಈ ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ಎಂದು ಅವರು ತಿಳಿಸಿದ್ದಾರೆ.

ಎನ್‌ಎಸ್‌ಯುಐಯ ಮಾಧ್ಯಮ ಹಾಗೂ ಸಂವಹನ ಮ್ಯಾನೇಜರ್ ಸೈಮನ್ ಫಾರೂಕಿ ಮಾರ್ಚ್‌ನಲ್ಲಿ ಎಫ್‌ಐಆರ್ ದಾಖಲಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಆರೋಪವನ್ನು ಸಾಬೀತುಪಡಿಸಲು ವಿಶ್ವವಿದ್ಯಾನಿಲಯ ವಿಫಲವಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News