ಅಂದೇಕೆ ಕಾನೂನು ನೆನಪಾಗಲಿಲ್ಲ?

Update: 2018-09-24 18:31 GMT

ಮಾನ್ಯರೇ,

ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ‘ಭವಿಷ್ಯ ಭಾರತ ಆರೆಸ್ಸೆಸ್ ದೃಷ್ಟಿಕೋನ’ ಕಾರ್ಯಕ್ರಮದಲ್ಲಿ ‘‘ಗೋರಕ್ಷಕರು ಗೋರಕ್ಷಣೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು’’ಎಂದು, ಆರೆಸ್ಸೆಸ್ ನಾಯಕ ಮೋಹನ್ ಭಾಗತ್ ಗೋರಕ್ಷಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಆದರೆ, ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಜೂನ್ 18ರಂದು ಗೋರಕ್ಷರ ಗುಂಪೊಂದು ಖಾಸಿಂ ಖುರೇಷಿ ಎನ್ನುವ ಬಡ ಮುಸ್ಲಿಂ ವ್ಯಕ್ತಿಯನ್ನು ಸಾರ್ವಜನಿಕವಾಗಿ ಥಳಿಸಿ ಹತ್ಯೆ ಮಾಡಿತು. ಈ ವಿಚಾರವಾಗಿ ಮಾತನಾಡಿದ್ದ ಇದೇ ಭಾಗವತರು ‘‘ಗೋವನ್ನು ಹತ್ಯೆ ಮಾಡುವುದು ಮತ್ತು ತಿನ್ನುವುದು ನಿಲ್ಲಿಸಿದರೆ ಮಾತ್ರ ಗುಂಪು ಹತ್ಯೆಗಳು ನಿಲ್ಲುತ್ತವೆ’’ ಎಂದು ಗೋರಕ್ಷಕರ ದಾಳಿ ಮತ್ತು ಹತ್ಯೆಗಳನ್ನು ಸಮರ್ಥಿಸಿದ್ದರು. ಈ ರೀತಿಯ ವಿರೋಧಾಭಾಸದ ಹೇಳಿಕೆಗಳನ್ನು ಮೋಹನ್ ಭಾಗವತ್ ನೀಡಲು ಆರಂಭಿಸಿರುವುದು, ಚುನಾವಣಾ ರಾಜಕಾರಣಕ್ಕೆ ಸಾಫ್ಟ್ ಹಿಂದುತ್ವದ ಹೊಸ ಅಸ್ತ್ರ ತಯಾರು ಮಾಡಿಕೊಳ್ಳುತ್ತಿರುವ ಸೂಚನೆ ಅನ್ನಬಹುದು. ಸಂದರ್ಭಕ್ಕೆ ತಕ್ಕಂತೆ ತಾಳ ಹಾಕುವ ಜಾಣತನದ ನಡೆಗಳು, ಕಣ್ಣಿಗೆ ಖಾರ ಹಾಕಿ ನೀರು ಕೊಡುವ ಕೆಲಸಗಳು ಯಾಕೆ? ಅಂದು ಹೇಳಿಕೆ ನೀಡುವಾಗ ಯಾಕೆ ಕಾನೂನು ನೆನಪಾಗಲಿಲ್ಲ? ಕಾನೂನನ್ನು ಗೌರವಿಸುವುದನ್ನು ಗೋರಕ್ಷಕರಿಗೆ ಕಲಿಸದೆ, ಇಂತಹ ಜಾಣತನದ ಹೇಳಿಕೆಗಳನ್ನು ನೀಡುವುದನ್ನು ಈಗಲಾದರೂ ನಿಲ್ಲಿಸಿ. ಹಿಂದೂ ಎನಿಸಿಕೊಂಡವರ ನಡುವೆಯೇ ಇರುವ ಜಾತಿಯ ಗೋಡೆಗಳನ್ನು ಒಡೆಯಿರಿ ಮತ್ತು ‘ಹಿಂದೂ ನಾವೆಲ್ಲ ಒಂದು’ ಎನ್ನುವ ಹಿಂದೂಗಳಲ್ಲೇ ಪ್ರೇಮಿಸಿ ಮದುವೆಯಾಗುವವರನ್ನು ಮರ್ಯಾದಗೇಡು ಹತ್ಯೆ ಮಾಡುತ್ತಿರುವುದನ್ನು ತಪ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿ. ಹಿಂದೂ ಸಂಸ್ಕೃತಿಯನ್ನು ‘ರಕ್ಷಿಸಲೇ’ ಇರುವ ದೇಶದ ದೊಡ್ಡ ಸಂಘಟನೆಯಾದ ಆರೆಸ್ಸೆಸ್‌ನ ಸದಸ್ಯರನ್ನು ಇಂತಹ ರಚನಾತ್ಮಕ ಕೆಲಸ ಮಾಡಲು ಹೇಳಿ. ಕೇವಲ ಹೇಳಿಕೆಗಳು ಯಾವುದೇ ಸುಧಾರಣೆ ಮಾಡುವುದಿಲ್ಲ.

Writer - -ಸಂಜೀವ್, ಬೆಂಗಳೂರು

contributor

Editor - -ಸಂಜೀವ್, ಬೆಂಗಳೂರು

contributor

Similar News