1,000 ಅಕ್ರಮ ಆಸ್ತಿಗಳ ಪಟ್ಟಿ ನೀಡಿದರೆ ನಿಮ್ಮನ್ನೇ ಸೀಲಿಂಗ್ ಅಧಿಕಾರಿ ಮಾಡುವೆ: ಸಂಸದ ತಿವಾರಿಗೆ ಸುಪ್ರೀಂ ಚಾಟಿಯೇಟು

Update: 2018-09-25 14:58 GMT

ಹೊಸದಿಲ್ಲಿ,ಸೆ.25: ದಿಲ್ಲಿಯಲ್ಲಿ ಅಕ್ರಮ ಕಟ್ಟಡಗಳನ್ನು ಮೊಹರಬಂದ್ ಮಾಡುವುದರ ಕುರಿತು ತನ್ನ ನಿರ್ದೇಶನಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಿಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಮನೋಜ ತಿವಾರಿ ಅವರನ್ನು ಮಂಗಳವಾರ ತೀವ್ರ ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು, ಸಂಸದನೆಂಬ ಮಾತ್ರಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳಲು ಅದು ಅಧಿಕಾರ ನೀಡುವುದಿಲ್ಲ ಎಂದು ಹೇಳಿತು.

 ದಿಲ್ಲ ಮಾಸ್ಟರ್ ಪ್ಲಾನ್‌ನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡವೊಂದನ್ನು ಅಧಿಕಾರಿಗಳು ವಶಪಡಿಸಿಕೊಂಡು ಹಾಕಿದ್ದ ಬೀಗವನ್ನು ಒಡೆದಿದ್ದಕ್ಕಾಗಿ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ತಿವಾರಿ ನ್ಯಾಯಾಲಯದಲ್ಲಿ ಹಾಜರಾಗಿದ್ದರು.

ಸಾವಿರಾರು ಅಕ್ರಮ ಕಟ್ಟಡಗಳಿದ್ದು,ನಿಗಾ ಸಮಿತಿಯು ಅವುಗಳನ್ನು ಜಪ್ತಿ ಮಾಡುತ್ತಿಲ್ಲ ಎಂಬ ತಿವಾರಿ ಹೇಳಿಕೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ.ಬಿ.ಲೋಕೂರ್ ನೇತೃತ್ವದ ಪೀಠವು, ಈ ಬಗ್ಗೆ ವಾರದೊಳಗೆ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಅವರಿಗೆ ಆದೇಶಿಸಿತು. ಈ ವಿಷಯದಲ್ಲಿ ಸುದ್ದಿವಾಹಿನಿಗೆ ನೀಡಿರುವ ಹೇಳಿಕೆಯನ್ನು ವಿವರಿಸುವಂತೆಯೂ ಅದು ಸೂಚಿಸಿತು.

ಸೀಲ್ ಮಾಡಲು ಅರ್ಹವಾಗಿರುವ 1,000 ಅಕ್ರಮ ಕಟ್ಟಡಗಳಿವೆ ಎಂದು ನೀವು ಹೇಳಿದ್ದೀರಿ. ಅವುಗಳ ಪಟ್ಟಿಯನ್ನು ನಮಗೆ ನೀಡಿ,ನಿಮ್ಮನ್ನೇ ಸೀಲಿಂಗ್ ಅಧಿಕಾರಿಯನ್ನಾಗಿ ಮಾಡುತ್ತೇವೆ ಎಂದು ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಝೀರ್ ಮತ್ತು ದೀಪಕ ಗುಪ್ತಾ ಅವರನ್ನೂ ಒಳಗೊಂಡಿದ್ದ ಪೀಠವು ತಿವಾರಿಗೆ ಕುಟುಕಿತು.

 ಈಶಾನ್ಯ ದಿಲ್ಲಿಯ ಗೋಕುಲಪುರಿಯಲ್ಲಿ ಅಕ್ರಮ ಕಟ್ಟಡಕ್ಕೆ ಹಾಕಲಾಗಿದ್ದ ಬೀಗವನ್ನು ಒಡೆದಿದ್ದಕ್ಕಾಗಿ ಪೂರ್ವ ದಿಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿವಾರಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News