ಜನಪ್ರತಿನಿಧಿಗಳು ವಕೀಲ ವೃತ್ತಿ ಮಾಡಬಹುದು: ಸುಪ್ರೀಂ ಕೋರ್ಟ್

Update: 2018-09-25 16:37 GMT

ಹೊಸದಿಲ್ಲಿ, ಸೆ. 25: ಜನಪ್ರತಿನಿಧಿಗಳು ವಕೀಲರಾಗಿ ವೃತ್ತಿ ನಿರ್ವಹಿಸುವುದನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಮಂಗಳವಾರ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ಭಾರತದ ಬಾರ್ ಕೌನ್ಸಿಲ್ ನಿಯಮ ಅವರನ್ನು ನಿಷೇಧಿಸುವುದಿಲ್ಲ ಎಂದಿದೆ.

ತಮ್ಮ ಅಧಿಕಾರ ಅವಧಿಯಲ್ಲಿ ಸಂಸದರು, ಶಾಸಕರು ಹಾಗೂ ಸಚಿವರು ನ್ಯಾಯಾಲಯಗಳಲ್ಲಿ ವಕೀಲ ವೃತ್ತಿ ನಡೆಸುವುದನ್ನು ನಿಷೇಧಿಸುವಂತೆ ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯ ಆದೇಶವನ್ನು ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ತಿರಸ್ಕರಿಸಿದೆ.

ಇದಕ್ಕಿಂತ ಹಿಂದೆ ಕೇಂದ್ರದ ಪ್ರತಿಪಾದನೆ ಗಮನಿಸಿದ ಪೀಠ, ಸಂಸದ, ಶಾಸಕ ಚುನಾಯಿತ ಜನಪ್ರತಿನಿಧಿಗಳು. ಅವರು ಸರಕಾರದ ಪೂರ್ಣ ಪ್ರಮಾಣದ ಅಧಿಕಾರಿಗಳಲ್ಲ. ಆದುದರಿಂದ ಮನವಿ ಸಮರ್ಥನೀಯವಲ್ಲ ಎಂದಿದೆ. ಆದಾಗ್ಯೂ, ಉಪಾಧ್ಯಾಯ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಶೇಖರ್ ನಫಾಡೆ, ಜನಪ್ರತಿನಿಧಿಗಳು ರಾಜ್ಯದ ಬೊಕ್ಕಸದಿಂದ ವೇತನ ಪಡೆಯುತ್ತಾರೆ. ಆದುದರಿಂದ ವೇತನ ಪಡೆಯುತ್ತಿರುವ ಜನಪ್ರತಿನಿಧಿಗಳು ನ್ಯಾಯಾಲಯಗಳಲ್ಲಿ ವಕೀಲ ವೃತ್ತಿ ಮಾಡುವುದನ್ನು ಬಾರ್ ಕೌನ್ಸಿಲ್ ರದ್ದುಗೊಳಿಸಬೇಕು ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News