‘ದಲಿತ’ ಶಬ್ದವನ್ನು ಬಳಸಬಾರದು, ಆದರೆ ಇತರ ಜಾತಿ ಸೂಚಕ ಹೆಸರುಗಳನ್ನು ಬಳಸಬಹುದೇ?

Update: 2018-09-25 18:36 GMT

ಭಾಗ-2

‘ಬ್ರಾಹ್ಮಣ’ ಶಬ್ದ ದಲಿತರಿಗೆ ಅವಮಾನಕಾರಿ

ನಾವು ಮುಕ್ತವಾಗಿ, ನೇರವಾಗಿ ಮಾತಾಡೋಣ. ಹಲವಾರು ದಾವೆಗಳನ್ನು ಹೂಡಿದರೂ, ಅರ್ಜಿಗಳನ್ನು ಸಲ್ಲಿಸಿದರೂ ನ್ಯಾಯಾಲಯಗಳಾಗಲಿ, ಸರಕಾರವಾಗಲಿ ‘ಬ್ರಾಹ್ಮಿಣ್’(ಬ್ರಾಹ್ಮಣ) ಎಂಬ ಶಬ್ದವನ್ನು ನಿಷೇಧಿಸಿಯಾವೆ? ವರ್ಣಾಶ್ರಮದ ಶ್ರೇಣೀಕರಣದಿಂದಾಗಿ ಬ್ರಹ್ಮನ ಮುಖದಿಂದ ತಾವು ಜನಿಸಿದವರೆಂದು ನಂಬುವ ಕಾರಣಕ್ಕಾಗಿ ಬ್ರಾಹ್ಮಣರು ಸಮಾಜದಲ್ಲಿ ಪರಮೋನ್ನತರು ತಾನೇ?

ದಲಿತರನ್ನು ಅವಮಾನಿಸುವ ಮೊದಲ ಶಬ್ದ ‘ಬ್ರಾಹ್ಮಣ’. ಆಕ್ಸ್‌ಫರ್ಡ್ ನಿಘಂಟು ಬ್ರಾಹ್ಮಣರನ್ನು ಸಾಮಾಜಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಮೇಲಿರುವ (ಸುಪೀರಿಯರ್) ವ್ಯಕ್ತಿ ಎಂದು ವ್ಯಾಖ್ಯಾನಿಸುತ್ತದೆ. ಇದರಿಂದ ಸಮಾಜದಲ್ಲಿರುವ ಇತರರು ಕೀಳು (ಇನ್‌ಫೀರಿಯರ್) ಎಂದಂತಾಗುವುದಿಲ್ಲವೇ? ಜನರ ಒಂದು ಗುಂಪನ್ನು ಒಂದು ಸಮುದಾಯವನ್ನು ಇತರರಿಗಿಂತ ಎತ್ತರದ ಸ್ಥಾನದಲ್ಲಿರಿಸುವ ಮೂಲಕ ‘ಬ್ರಾಹ್ಮಣ’ ಪದವು ಇತರರನ್ನು ದಮನಿಸುತ್ತದಾದ್ದರಿಂದ ‘ಬ್ರಾಹ್ಮಣ’ ಎಂಬ ಶಬ್ದವನ್ನು ಬಹಳ ಹಿಂದೆಯೇ ನಿಷೇಧಿಸಬೇಕಿತ್ತು.

ಆದರೆ ಇಂದಿಗೂ ಕೂಡ ಬ್ರಾಹ್ಮಣರು ತಮ್ಮ ಜಾತಿ ಸೂಚಕ ಹೆಸರುಗಳನ್ನು, ಸರ್‌ನೇಮ್‌ಗಳನ್ನು ತಮ್ಮ ಹೆಸರಿನ ಮುಂದೆ ಹೆಮ್ಮೆಯಿಂದ ಹಾಕಿಕೊಳ್ಳುತ್ತಾರೆ. ವಾರ್ತಾವರದಿಗಳು, ಅಂಕಣಗಳು ಹಾಗೂ ಟಿವಿ ಶೋಗಳಲ್ಲದೆ ‘ಬ್ರಾಹ್ಮಣರಿಗೆ ಮಾತ್ರ’ ಎಂಬ ವೈವಾಹಿಕ ಹಾಗೂ ಬಾಡಿಗೆ ಜಾಹೀರಾತುಗಳು ಪ್ರಕಟವಾಗುತ್ತವೆ. ‘ಬ್ರಾಹ್ಮಣರಿಗೆ ಮಾತ್ರ’ ಎಂಬ ಆಸ್ತಿ/ ಮನೆ ಜಾಹೀರಾತುಗಳು ಕೂಡಾ ಬರುತ್ತವೆ! ಇವುಗಳನ್ನು ದಿನಪತ್ರಿಕೆಗಳು ಮುಕ್ತವಾಗಿಯೇ ಪ್ರಕಟಿಸುತ್ತವೆ.

ಸಂವಿಧಾನದಲ್ಲಿ ಬಳಸಿದ ನಾಮಧೇಯವನ್ನು ಮತ್ತು ಮುಂಬೈ ಹೈಕೋರ್ಟ್‌ನ ತರ್ಕವನ್ನು ನಾವು ಅನುಸರಿಸುವುದಾದಲ್ಲಿ, ಬ್ರಾಹ್ಮಣ ಶಬ್ದವನ್ನು ಮಾಧ್ಯಮಗಳು ಬಳಸಲೇಬಾರದು. ಬದಲಾಗಿ ‘ಸಾಮಾನ್ಯ ವರ್ಗ’ (ಜನರಲ್ ಕೆಟಗರಿ) ಅಥವಾ ‘ಪರಿಶಿಷ್ಟೇತರ ಜಾತಿಗಳು’ (ನಾನ್ ಶೆಡ್ಯೂಲ್ಡ್ ಕಾಸ್ಟ್ಸ್) ಎಂಬ ಪದಗಳನ್ನೇ ಬಳಸಬೇಕು.

ತೀರಾ ಈಚೆಗೆ ‘ಬ್ರಾಹ್ಮಣ ದೌರ್ಜನ್ಯ ಕಾಯ್ದೆ’ಯನ್ನು ಜಾರಿಗೆ ತರಬೇಕೆಂಬ ಒಂದು ಅರ್ಜಿಯನ್ನು ಚೇಂಜ್.ಆರ್ಗ್ ವೆಬ್‌ಸೈಟಿಗೆ ಅಪ್‌ಲೋಡ್ ಮಾಡಿ ಸುಪ್ರೀಂಕೋರ್ಟಿಗೆ ಮತ್ತು ಪ್ರಧಾನಿಯವರ ಕಚೇರಿಗೆ ಕಳುಹಿಸಲಾಯಿತು. ಅವರಿಗೆ ದೌರ್ಜನ್ಯ ಪದದ ಅರ್ಥವಾದರೂ ಗೊತ್ತಿದೆಯೇ? ಆಂಧ್ರಪ್ರದೇಶ ಸರಕಾರವು ‘ಬ್ರಾಹ್ಮಣ ಕಲ್ಯಾಣ ಪಾಲಿಕೆ’ ಎಂಬ ಒಂದು ಕಾರ್ಪೊರೇಷನ್ ಅನ್ನು ಸ್ಥಾಪಿಸಿ ಅದಕ್ಕೆ ಇನ್ನೂರು ಕೋಟಿ ರೂಪಾಯಿ ಮಂಜೂರು ಮಾಡಿದೆ. ಸರಕಾರ ಹೀಗೆ ಬ್ರಾಹ್ಮಣ ಶಬ್ದವನ್ನು ಬಳಸುವುದು ಕಾನೂನು ವಿರೋಧಿಯಲ್ಲವೇ? ಇದನ್ನು ಅಸಾಂವಿಧಾನಿಕ ಎಂದು ನಿಷೇಧಿಸುವ ಧೈರ್ಯ ಯಾರಿಗಾದರೂ ಇದೆಯೇ?

ಬ್ರಾಹ್ಮಣರು ತಮ್ಮ ಜಾತಿಯ ಹೆಸರುಗಳನ್ನು ಸರ್‌ನೇಮ್ ಆಗಿ ಬಳಸುತ್ತಾರೆ. ಭಟ್, ಶರ್ಮಾ, ತ್ರಿವೇದಿ, ಗೋಖಲೆ, ಮುಖರ್ಜಿ, ಮಿಶ್ರಾ, ಆಚಾರ್ಯ, ಶಾಸ್ತ್ರಿ, ನಂಬೂದಿರಿ, ಅಯ್ಯರ್ ಇತ್ಯಾದಿ ಇತ್ಯಾದಿ. ಈ ಸರ್‌ನೇಮ್ಗಳು ಮೌಖಿಕ ಜಾತಿ ಪ್ರಮಾಣ ಪತ್ರಗಳು. ಅವಕಾಶಗಳ ಎಲ್ಲ ಬಾಗಿಲುಗಳನ್ನು ತೆರೆಯಲು ಹೆಸರು ಒಂದೇ ಸಾಕಾಗುತ್ತದೆ. ಹೀಗಾಗಿಯೇ ಅಕ್ಷರಶಃ ಎಲ್ಲ ರಂಗಗಳಲ್ಲೂ ಬ್ರಾಹ್ಮಣರು ದೇಶಾದ್ಯಂತ ಪ್ರಬಲವಾದ, ಪ್ರಭಾವಶಾಲಿಯಾದ ಹುದ್ದೆಗಳನ್ನು ಅಲಂಕರಿಸುತ್ತಾರೆ.

 ಹಿಂದೂ ಸವರ್ಣೀಯರು ಹೆಮ್ಮೆಯಿಂದ ತಮ್ಮ ಜಾತಿಸೂಚಕ ಹೆಸರು ಗಳನ್ನು ಬಳಸುತ್ತಾರೆ; ದಮನಕ್ಕೊಳಗಾದ ದಲಿತರು ಅವಮಾನದಿಂದ ಬಳಸುತ್ತಾರೆ. ವಿಚಾರವಾದಿಗಳು, ಪುರೋಗಾಮಿಗಳು, ಮಹಿಳಾ ಹಕ್ಕು ಕಾರ್ಯಕರ್ತರು ಮೊದಲಾದವರು ಜಾತಿಯ ವಿರುದ್ಧ ಮಾತನಾಡುತ್ತಾ ರಾದರೂ ತಮ್ಮ ಜಾತಿಯನ್ನು ಸೂಚಿಸುವ ಶಬ್ದಗಳ ಬಗ್ಗೆ ಅವರು ಜಾಗೃತರಾಗಿರುವುದು ಕಂಡುಬರುವುದಿಲ್ಲ. ಭಾರತದಲ್ಲಿ ಬಹಳ ಮಂದಿ ಜಾತಿ ಜನಸಾಮಾನ್ಯರ ನಡುವೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯುತ್ತಾರೆ. ಆದರೆ ಪ್ರತಿಯೊಬ್ಬ ಭಾರತೀಯನಿಗೂ, ಆತ ಪುರೋಗಾಮಿ ಇರಲಿ ಅಥವಾ ಸಂಪ್ರದಾಯ ಶರಣನಿರಲಿ ಜಾತಿ ಮನುಷ್ಯನ ಮನಸ್ಸಿನ ಆಳದಲ್ಲಿ ಕೆಲಸ ಮಾಡುತ್ತದೆ. ಭಾರತದ ಪುರೋಗಾಮಿಗಳ, ಶಿಕ್ಷಿತ ತಲೆಮಾರುಗಳ ಸಮಸ್ಯೆ ಇದು: ಜಾತಿಯ ವಿಷಯಕ್ಕಾಗುವಾಗ ಇತರರಿಗೆ ಅನ್ವಯಿಸುವ ನಿಯಮಗಳನ್ನು ಅವರು ತಮಗೆ ಅನ್ವಯಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರು ಹೆಸರುಗಳಲ್ಲಿ ಜಾತಿ ಸೂಚಕ ಶಬ್ದಗಳನ್ನು ಹೊತ್ತುಕೊಂಡೇ ತಿರುಗುತ್ತಾರೆ. ಹಿಂದುತ್ವವನ್ನು ಬಲವಾಗಿ ವಿರೋಧಿಸುವ ಮಹಿಳೆಯರು ಕೂಡ ಹೀಗೆಯೇ ಮಾಡುತ್ತಾರೆ. ಜಾತಿ ವ್ಯವಸ್ಥೆಯು ಮಹಿಳೆಯರನ್ನು ಕೀಳಾಗಿ ಪರಿಗಣಿಸುತ್ತದೆ. ತಮ್ಮ ಹಿಂದಿನ ಜನ್ಮದಲ್ಲಿ ಪಾಪ ಮಾಡಿದವರು ಹೆಣ್ಣಾಗಿ ಜನಿಸುತ್ತಾರೆ ಎಂದು ಮನುಸ್ಮತಿ ಹೇಳುತ್ತದೆ.

ತಮಿಳುನಾಡು ತನ್ನ ಜಾತಿ ಸೂಚಕ ಹೆಸರುಗಳನ್ನು ಬಿಟ್ಟದ್ದು ಹೇಗೆ?
ಜಾತಿ ಕುರಿತು ಇವಿ ರಾಮಸ್ವಾಮಿ ಪೆರಿಯಾರ್‌ರವರಿಗಿದ್ದ ಸ್ಪಷ್ಟತೆ ತಮಿಳುನಾಡಿನಲ್ಲಿ ಜನರು ತಮ್ಮ ಜಾತಿ ಹೆಸರುಗಳನ್ನು ಕೈಬಿಡಲು ಕಾರಣವಾಯಿತು. ಪೆರಿಯಾರ್ ಅವರು ತಮ್ಮ ಹೆಸರಿನಿಂದ ನಾಯ್ಕರ್ ಶಬ್ದವನ್ನು ಕಿತ್ತು ಹಾಕಿದರು.
ತಮಿಳುನಾಡಿನಲ್ಲಿ ಈಗ ಯಾರೂ ಕೂಡ ತಮ್ಮ ಜಾತಿಸೂಚಕ ಹೆಸರುಗಳನ್ನು ಬಳಸುವುದಿಲ್ಲ. ಹೆಚ್ಚಿನ ಬ್ರಾಹ್ಮಣರು ಕೂಡ ತಮ್ಮ ಜಾತಿಯ ಹೆಸರನ್ನು ಬಳಸುತ್ತಿಲ್ಲ.

ಇಂದು ತಮ್ಮ ಜಾತಿ ಸೂಚಕ ಸರ್‌ನೇಮ್‌ಗಳನ್ನು ಹೊರುವುದು ದಲಿತರ ಪಾಲಿಗೆ ಅತ್ಯಂತ ಅವಮಾನಕಾರಿಯಾದ ವಿಷಯವಾಗಿದೆ.
ಭಾರತದಲ್ಲಿ ಜಾತಿಯ ಸುತ್ತ ಲೆಕ್ಕವಿಲ್ಲದಷ್ಟು ಚರ್ಚೆಗಳು ನಡೆಯುತ್ತಿವೆ; ಹತ್ತಾರು ಪ್ರತಿಭಟನೆಗಳು ನಡೆಯುತ್ತಿವೆ. ಜಾತಿಯ ಕುರಿತು ಅಂಬೇಡ್ಕರ್ ಹತ್ತು ಸಾವಿರಕ್ಕೂ ಹೆಚ್ಚು ಪುಟಗಳನ್ನು ಬರೆದಿದ್ದಾರೆ. ಆದರೂ ಭಾರತೀಯರು ವಿದೇಶಗಳಲ್ಲಿ ನೆಲೆಸಿರುವವರು ಕೂಡ, ತಮ್ಮ ಜಾತಿಯನ್ನು ಬಿಡಲು ಸಿದ್ಧರಿಲ್ಲ. ವಿದೇಶದಲ್ಲಿರುವ ಭಾರತೀಯನೊಬ್ಬನ ಮೇಲೆ ಒಂದು ಜನಾಂಗದಾಳಿ ನಡೆದರೆ ಅವರು ಪ್ರತಿಭಟಿಸುತ್ತಾರೆ. ಆದರೆ ದಲಿತರಿಗೆ ಭಾರತದಲ್ಲಿ ಏನು ಮಾಡಿದರೂ ಅದು ‘ಸಂಸ್ಕೃತಿ’ ಎಂದು ಅವರು ಸುಮ್ಮನಿರುತ್ತಾರೆ.

ಜಾತಿ ಒಂದು ಅಪರಾಧ
ಸವರ್ಣೀಯ ಹಿಂದೂಗಳು ಶಾಲೆಗಳಲ್ಲಿ ಕೇಳಲಾಗುವ ಜಾತಿ ಪ್ರಮಾಣ ಪತ್ರದ ಬಗ್ಗೆ ಸಿಟ್ಟಾಗುತ್ತಾರೆ ಆದರೆ ತಮ್ಮ ಹೆಸರಿನಲ್ಲೇ ಅವರು ಜಾತಿಯನ್ನು ಹೊತ್ತಿರುತ್ತಾರೆ.
ಅಂಬೇಡ್ಕರ್ ಕಾಲದಲ್ಲಿ ಅಸ್ಪೃಶ್ಯತೆಯನ್ನು ಮಾತ್ರ ಒಂದು ಅಪರಾಧವೆಂದು ಸಾರಲಾಯಿತು. ಅವರು ಎಷ್ಟೇ ಹೋರಾಡಿದರೂ ಜಾತಿಯನ್ನು ಒಂದು ಅಪರಾಧವೆಂದು ಮಾಡಲು ಸಾಧ್ಯವಾಗಲಿಲ್ಲ. ಸಂವಿಧಾನದಲ್ಲಿ ಜಾತಿಯನ್ನು ಒಂದು ಅಪರಾಧವೆಂದು ಮಾಡಿದ್ದರೆ ಜಾತಿ ಸೂಚಕ ಹೆಸರುಗಳನ್ನು ಕುಟುಂಬದ ಹೆಸರುಗಳಾಗಿ ಬಳಸುವ ಕ್ರಮ ಕೊನೆಗೊಳ್ಳುತ್ತಿತ್ತು.

ನ್ಯಾಯಾಲಯಗಳಿಗೆ ಮತ್ತು ಸರಕಾರಕ್ಕೆ ದಲಿತರ ಘನತೆಯ ಬಗ್ಗೆ ನಿಜವಾಗಿಯೂ ಕಾಳಜಿ ಇರುವುದಾದಲ್ಲಿ, ಅವುಗಳು, ‘ಬ್ರಾಹ್ಮಣ’ ಪದವು ಸೇರಿದಂತೆ ದೇಶದಲ್ಲಿರುವ ಎಲ್ಲ 6,000 ಜಾತಿ ಹೆಸರುಗಳನ್ನು ಕಾನೂನು ಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಿಸಲಿ.


ಕೃಪೆ:  thewire.in                    

Writer - ಜಯರಾಣಿ

contributor

Editor - ಜಯರಾಣಿ

contributor

Similar News