ಸಿಜೆಐ ಆಗಿ ಗೊಗೋಯ್ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ

Update: 2018-09-26 14:07 GMT

ಹೊಸದಿಲ್ಲಿ, ಸೆ.26: ಭಾರತದ ಮುಂದಿನ ಪ್ರಧಾನ ನ್ಯಾಯಾಧೀಶ(ಸಿಜೆ)ರನ್ನಾಗಿ ನ್ಯಾಯಾಧೀಶ ರಂಜನ್ ಗೊಗೋಯ್ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ತಿಳಿಸಿರುವ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.

ನೇಮಕದ ವಿಷಯದಲ್ಲಿ ಈ ಹಂತದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಕ್ಕೆ ಬಂದಿರುವುದಾಗಿ ಪ್ರಧಾನ ನ್ಯಾಯಾಧೀಶ ದೀಪಕ್ ಮಿಶ್ರ, ನ್ಯಾಯಾಧೀಶರಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠ ತಿಳಿಸಿದೆ. ವಕೀಲರಾದ ಆರ್.ಪಿ.ಲೂಥ್ರಾ ಮತ್ತು ಸತ್ಯವೀರ್ ಶರ್ಮ ಅರ್ಜಿ ಸಲ್ಲಿಸಿದವರು. ಕಳೆದ ಜನವರಿ 12ರಂದು ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಾಧೀಶರು ಸಿಐಜೆ ವಿರುದ್ಧ ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದ್ದು, ಇದರಲ್ಲಿ ರಂಜನ್ ಗೊಗೋಯ್ ಕೂಡಾ ಸೇರಿದ್ದರು.

ಇವರ ಈ ನಡೆ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಪ್ರಯತ್ನಕ್ಕೆ ಸಮಾನವಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಇದೀಗ ಇವರನ್ನು (ಗೊಗೋಯ್) ಪುರಸ್ಕರಿಸುವುದು ಸರಿಯಲ್ಲ. ನ್ಯಾಯಾಂಗಕ್ಕೆ ಅಪಚಾರ ಎಸಗಿರುವ ಜೊತೆಗೆ ಇದರ ದುರ್ಬಳಕೆ ಮಾಡಿಕೊಂಡ ವ್ಯಕ್ತಿಗೆ ದೇಶದ ಅತ್ಯುನ್ನತ ನ್ಯಾಯಾಧಿಕಾರಿಯ ಹುದ್ದೆಯನ್ನು ನೀಡುವುದು ಸರಿಯಲ್ಲ ಎಂದು ಅರ್ಜಿದಾರರು ತಿಳಿಸಿದ್ದರು.

 ಈ ಹಿನ್ನೆಲೆಯಲ್ಲಿ ಅಕ್ಟೋಬರ್ 3ರಿಂದ ಅನ್ವಯವಾಗುವಂತೆ ದೇಶದ ಮುಂದಿನ ಸಿಐಜೆಯಾಗಿ ಗೊಗೋಯ್‌ರನ್ನು ನೇಮಕ ಮಾಡಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಅರ್ಜಿದಾರರು ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News