ಜಗತ್ತಿನ ಇತರ ದೇಶಗಳು ತಮ್ಮ ಪ್ರಜೆಗಳನ್ನು ಹೇಗೆ ಗುರುತಿಸುತ್ತವೆ?

Update: 2018-09-28 18:21 GMT

ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿ ಮಾಡಿದ್ದ ಆಧಾರ್ ಭಾರತದಲ್ಲಿ ಪ್ರಜೆಗಳ ವಿಶಿಷ್ಟ ಗುರುತಾಗಿದೆ. ಜಗತ್ತಿನ ಇತರ ಕೆಲವು ದೇಶಗಳು ತಮ್ಮ ಪ್ರಜೆಗಳನ್ನು ಹೇಗೆ ಗುರುತಿಸುತ್ತವೆ ಎಂಬ ಬಗ್ಗೆ ಮಾಹಿತಿಯಿಲ್ಲಿದೆ....

ಅಮೆರಿಕ

ಅಮೆರಿಕದಲ್ಲಿ ಪ್ರಜೆಗಳಿಗೆ ಯಾವುದೇ ರಾಷ್ಟ್ರೀಯ ಗುರುತಿನ ಚೀಟಿಗಳಿಲ್ಲ. ಸಾಮಾಜಿಕ ಭದ್ರತೆ ಚೀಟಿ, ಚಾಲನಾ ಪರವಾನಿಗೆ,ಸರಕಾರಿ ಗುರುತು ಚೀಟಿ,ಪಾಸ್‌ಪೋರ್ಟ್ ಮತ್ತು ಮಿಲಿಟರಿ ಸಿಎಸಿ ಚೀಟಿಯನ್ನು ಪೌರತ್ವದ ದಾಖಲೆಗಳಾಗಿ ಪರಿಗಣಿಸಲಾಗುತ್ತದೆ.

ಬ್ರಿಟನ್

ಈ ರಾಷ್ಟ್ರದಲ್ಲಿ 2006ರ ಗುರುತು ಚೀಟಿ ಕಾಯ್ದೆಯನ್ನು ಕೈಬಿಟ್ಟು 2010ರಲ್ಲಿ ಗುರುತು ದಾಖಲೆಗಳ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಪಾಸ್‌ಪೋರ್ಟ್,ಚಾಲನಾ ಪರವಾನಿಗೆ,ಪ್ರಮಾಣೀಕೃತ ವಯಸ್ಸು ಪುರಾವೆ ಚೀಟಿಗಳನ್ನು ಪೌರತ್ವದ ದಾಖಲೆಗಳನ್ನಾಗಿ ಪರಿಗಣಿಸಲಾಗುತ್ತಿದೆ.

ರಷ್ಯಾ

ರಷ್ಯಾದಲ್ಲಿ ವಾಸವಾಗಿರುವ 14 ವರ್ಷ ಮತ್ತು ಮೇಲ್ಪಟ್ಟ ಎಲ್ಲ ರಷ್ಯನ್ ಪ್ರಜೆಗಳು ತಮ್ಮ ಗುರುತಿನ ಪುರಾವೆಯಾಗಿ ಆಂತರಿಕ ಪಾಸ್‌ಪೋರ್ಟ್ ಹೊಂದಿರುವುದು ಕಡ್ಡಾಯವಾಗಿದೆ. ಇದನ್ನು 20 ಮತ್ತು 45 ವರ್ಷ ಪ್ರಾಯದಲ್ಲಿ ಮರುನವೀಕರಿಸಬೇಕಾಗುತ್ತದೆ.

ಜಪಾನ್

2013ರಲ್ಲಿ ಅಂಗೀಕರಿಸಲಾಗಿರುವ ಮೈ ನಂಬರ್ ಕಾನೂನು ಪ್ರತಿ ಪ್ರಜೆಗೂ ಸಂಖ್ಯೆಯೊಂದನ್ನು ನೀಡುತ್ತದೆ ಮತ್ತು ತೆರಿಗೆ ನಿರ್ಧಾರ,ಸಾಮಾಜಿಕ ಭದ್ರತೆ ಮತ್ತು ವಿಪತ್ತು ಪರಿಹಾರ ಲಾಭಗಳ ಕುರಿತು ಕೇಂದ್ರ ಮತ್ತು ಸ್ಥಳೀಯ ಸರಕಾರಗಳು ಹೊಂದಿರುವ ಪ್ರತ್ಯೇಕ ವ್ಯಕ್ತಿಗತ ಮಾಹಿತಿಗಳನ್ನು ಜೋಡಣೆಗೊಳಿಸುತ್ತದೆ.

ಜರ್ಮನಿ

16 ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಜರ್ಮನ್ ಪ್ರಜೆಗಳು ಗುರುತು ಚೀಟಿ ಅಥವಾ ಪಾಸ್‌ಪೋರ್ಟ್ ಹೊಂದಿರುವುದು ಕಡ್ಡಾಯವಾಗಿದೆ.

ಫ್ರಾನ್ಸ್

 ಈ ದೇಶದಲ್ಲಿ ರಾಷ್ಟ್ರೀಯ ಗುರುತಿನ ಚೀಟಿ ವ್ಯವಸ್ಥೆಯಿದ್ದು,ಇದನ್ನು ಯುರೋಪ್ ಮತ್ತು ಫ್ರೆಂಚ್ ಸಾಗರೋತ್ತರ ಭೂಪ್ರದೇಶಗಳಲ್ಲಿ ಪ್ರವಾಸ ದಾಖಲೆಯನ್ನಾಗಿ ಮತ್ತು ಬ್ಯಾಂಕ್ ಖಾತೆ ಆರಂಭದಂತಹ ಇತರ ಉದ್ದೇಶಗಳಿಗೆ ಬಳಸಬಹುದಾಗಿದೆ. ಚೀಟಿಯಲ್ಲಿನ ವ್ಯಕ್ತಿಗತ ಮಾಹಿತಿಗಳ ಕೇಂದ್ರೀಕೃತ ದತ್ತಾಂಶ ಕೋಶವನ್ನು ಸೃಷ್ಟಿಸಲು ಸರಕಾರವು ಉದ್ದೇಶಿಸಿದೆಯಾದರೂ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಚೀನಾ

16 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಚೀನಿ ಪ್ರಜೆಗಳು ನಿವಾಸಿ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ಬ್ರಾಝಿಲ್

ಪ್ರತಿ ಬ್ರಾಝಿಲ್ ಪ್ರಜೆಯು ಆರ್‌ಜಿ ಕಾರ್ಡ್‌ಗಳೆಂದು ಕರೆಯಲಾಗುವ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ಹೊಂದಿರಬಹುದು,ಆದರೆ ಇದು ಕಡ್ಡಾಯವಲ್ಲ. ಇದರೊಂದಿಗೆ ವಾಹನ ಚಾಲನಾ ಪರವಾನಿಗೆ ಮತ್ತು ಪಾಸ್‌ಪೋರ್ಟ್‌ಗಳನ್ನೂ ಗುರುತಿನ ಚೀಟಿಗಳಾಗಿ ಪರಿಗಣಿಸಲಾಗುತ್ತದೆ.

ಆಸ್ಟ್ರೇಲಿಯಾ

1987 ಮತ್ತು 2007ರಲ್ಲಿ ಪ್ರಜೆಗಳಿಗೆ ಗುರುತು ಚೀಟಿಗಳನ್ನು ವಿತರಿಸುವ ಎರಡು ಪ್ರಸ್ತಾವಗಳು ಸರಕಾರದ ಮುಂದಿದ್ದವಾದರೂ ಖಾಸಗಿತನ ಬಹಿರಂಗಗೊಳ್ಳುವ ಕಳವಳಗಳು ವ್ಯಕ್ತವಾದನಂತರ ಅವುಗಳನ್ನು ಕೈಬಿಡಲಾಗಿತ್ತು. ಮೆಡಿಕೇರ್ ಕಾರ್ಡ್ ಸಂಖ್ಯೆ,ತೆರಿಗೆ ಸಲ್ಲಿಕೆ ಕಡತದ ಸಂಖ್ಯೆ ಮತು ಚಾಲನಾ ಪರವಾನಿಗೆ ಈ ರಾಷ್ಟ್ರದಲ್ಲಿ ಗುರುತಿನ ಚೀಟಿಗಳಾಗಿ ಬಳಕೆಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News