ಬಿಜೆಪಿ ಶಾಸಕ ಸಂಗೀತ್ ಸೋಮ್ ಹತ್ಯೆಗೆ ಯತ್ನ; ಮನೆ ಮೇಲೆ ಗ್ರೆನೇಡ್ ಎಸೆದ ದುಷ್ಕರ್ಮಿಗಳು

Update: 2018-09-27 15:06 GMT

ಲಕ್ನೊ, ಸೆ.27: 2013ರ ಮುಝಫ್ಪರ್‌ನಗರ ಹಿಂಸಾಚಾರ ಪ್ರಕರಣದ ಆರೋಪಿ, ಬಿಜೆಪಿ ಶಾಸಕ ಸಂಗೀತ್ ಸೋಮ್ ಮೇಲೆ ಅಪರಿಚಿತ ದುಷ್ಕರ್ಮಿಗಳು ಆಕ್ರಮಣ ನಡೆಸಲು ಯತ್ನಿಸಿ ಗುಂಡು ಹಾರಿಸಿದ್ದಲ್ಲದೆ ಮನೆಯ ಮೇಲೆ ಗ್ರೆನೇಡ್ ಎಸೆದು ಪರಾರಿಯಾಗಿರುವ ಘಟನೆ ನಡೆದಿದೆ.

ಘಟನೆ ನಡೆದ ಸ್ಥಳದಿಂದ ಖಾಲಿ ಕಾರ್ಟ್ರಿಜ್ಡ್‌ಗಳು ಹಾಗೂ ಸ್ಫೋಟಿಸದ ಗ್ರೆನೇಡನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಂಬ್ ದಳ , ಶ್ವಾನ ದಳ ಹಾಗೂ ಉನ್ನತ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಎಸ್‌ಪಿ ಅಖಿಲೇಶ್ ಕುಮಾರ್ ತಿಳಿಸಿದ್ದಾರೆ. ಗುರುವಾರ ಬೆಳಿಗ್ಗಿನ ಜಾವ ಸುಮಾರು 1:00 ಗಂಟೆಗೆ ಶಾಸಕ ಸೋಮ್ ಮೀರತ್‌ನ ಮಾಲ್ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿದ್ದಾಗ ಸ್ವಿಫ್ಟ್ ಕಾರಿನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ತಂಡ ಶಾಸಕರು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಅವರತ್ತ ಗುಂಡು ಹಾರಿಸಿದ್ದಾರೆ. ಆದರೆ ಶಾಸಕರು ಪಾರಾಗಿದ್ದಾರೆ. ದುಷ್ಕರ್ಮಿಗಳಿದ್ದ ಕಾರನ್ನು ಮನೆಯ ಆವರಣದೊಳಗೆ ನುಗ್ಗಿಸಲು ಕಾರಿನ ಡೈವರ್ ಮುಂದಾದಾಗ ಗೇಟಿನಲ್ಲಿದ್ದ ಭದ್ರತಾ ಸಿಬಂದಿ ತಡೆದಿದ್ದಾನೆ. ಈ ಸಂದರ್ಭ ಓರ್ವ ದುಷ್ಕರ್ಮಿ ಮನೆಯೊಳಗೆ ಗ್ರೆನೇಡ್ ಎಸೆದಿದ್ದಾನೆ.

ಆದರೆ ಅದು ಸ್ಫೋಟಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳದವರು ಬಾಂಬನ್ನು ನಿಷ್ಕ್ರಿಯಗೊಳಿಸಿ ಅದನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದಾರೆ. ತನ್ನನ್ನು ಗ್ರೆನೇಡ್‌ನಿಂದ ಕೊಲ್ಲುವುದಾಗಿ ಎರಡು ವರ್ಷದ ಹಿಂದೆ ಬೆದರಿಕೆ ಕರೆ ಬಂದಿತ್ತು ಎಂದು ಸೋಮ್ ತಿಳಿಸಿದ್ದಾರೆ. ಝಡ್ ಕೆಟಗರಿ ಭದ್ರತೆ ಹೊಂದಿರುವ ಸೋಮ್ ಅವರ ಹತ್ಯೆಗೆ 2 ವರ್ಷದ ಹಿಂದೆ ವಿಫಲ ಪ್ರಯತ್ನ ನಡೆಸಲಾಗಿತ್ತು. ತನಗೆ ಐಸಿಸ್‌ನಿಂದ ಬೆದರಿಕೆ ಕರೆ ಬಂದಿದೆ ಎಂದು 2015ರ ಡಿಸೆಂಬರ್‌ನಲ್ಲಿ ಸೋಮ್ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News