ಲೋಕಪಾಲ್‌ಗೆ ಹೆಸರು ಶಿಫಾರಸಿಗೆ 8 ಸದಸ್ಯರ ಶೋಧ ಸಮಿತಿ ರಚನೆ
ಹೊಸದಿಲ್ಲಿ, ಸೆ. 27: ಲೋಕಪಾಲ್ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿದ ನಾಲ್ಕು ವರ್ಷಗಳ ಬಳಿಕ ಗುರುವಾರ 8 ಸದಸ್ಯರ ಶೋಧ ಸಮಿತಿ ರೂಪಿಸಲಾಗಿದೆ. ಈ ಸಮಿತಿ ಲೋಕಪಾಲ್‌ಗೆ ಸಮರ್ಥ ಸದಸ್ಯರನ್ನು ಶಿಫಾರಸು ಮಾಡಲಿದೆ. ಶೋಧ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ವಹಿಸಲಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ವರಿಷ್ಠೆ ಅರುಂಧತಿ ಭಟ್ಟಾಚಾರ್ಯ ಹಾಗೂ ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯ ಪ್ರಕಾಶ್ ಅವರನ್ನು ಕೂಡ ಈ ಸಮಿತಿ ಹೊಂದಿದೆ. ಇಸ್ರೋ ಮುಖ್ಯಸ್ಥ ಎ.ಎಸ್. ಕಿರಣ್ ಕುಮಾರ್, ಅಲಹಬಾದ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಸಖ್ನಾ ರಾಮ್ ಸಿಂಗ್ ಯಾದವ್, ಗುಜರಾತ್ ಪೊಲೀಸ್‌ನ ಮಾಜಿ ವರಿಷ್ಠ ಶಬೀರ್‌ಹುಸೈನ್ ಎಸ್. ಖಂಡ್ವವಾಲ, ನಿವೃತ್ತ ಸರಕಾರಿ ಅಧಿಕಾರಿ ಲಲಿತ್ ಕೆ. ಪನ್ವಾರ್, ಮಾಜಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ಸಮಿತಿಯ ಇತರ ಸದಸ್ಯರು. ಈ ಸಮಿತಿ ಲೋಕಪಾಲ್‌ಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಶಿಫಾರಸು ಮಾಡಲಿದೆ.