×
Ad

ಅಶ್ಲೀಲ ವಿಷಯಗಳನ್ನು ನಿಷೇಧಿಸದಿದ್ದರೆ ಲೈಸೆನ್ಸ್ ರದ್ದು: ಇಂಟರ್ ನೆಟ್ ಸಂಸ್ಥೆಗಳಿಗೆ ಹೈಕೋರ್ಟ್ ಎಚ್ಚರಿಕೆ

Update: 2018-09-28 19:14 IST

ನೈನಿತಾಲ್, ಸೆ.28: ಅಶ್ಲೀಲ ವಿಷಯಗಳನ್ನು ನಿಷೇಧಿಸದಿದ್ದರೆ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗಳಿಗೆ ಉತ್ತರಾಖಂಡ ಹೈಕೋರ್ಟ್ ಎಚ್ಚರಿಕೆ ನೀಡಿದ್ದು, ಅಶ್ಲೀಲ ವಿಷಯಗಳನ್ನು ನಿರೂಪಿಸುವ ವೆಬ್‌ಸೈಟ್‌ಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ತಿಳಿಸಿದೆ. ಕಳೆದ ವಾರ ಡೆಹ್ರಾಡೂನ್‌ನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಅಶ್ಲೀಲಚಿತ್ರ ವೀಕ್ಷಿಸಿದ ಬಳಿಕ ಸಹಪಾಠಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿರುವ ಹಿನ್ನೆಲೆಯಲ್ಲಿ, ಅಶ್ಲೀಲ ಮತ್ತು ಕಾಮಪ್ರಚೋದಕ ವಿಷಯಗಳ ಪ್ರಸಾರವನ್ನು ತಡೆಯುವಂತೆ ಹೈಕೋರ್ಟ್ ಇಂಟರ್‌ನೆಟ್ ಸೇವೆ ಒದಗಿಸುವ ಸಂಸ್ಥೆಗಳಿಗೆ ತಿಳಿಸಿದೆ. 

ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಹಲವು ನಿರ್ದೇಶಗಳನ್ನು ನೀಡಿರುವ ವಿಭಾಗೀಯ ಪೀಠವು , ಇಂತಹ ಅಶ್ಲೀಲ ವಿಷಯಗಳ ವೆಬ್‌ಸೈಟ್‌ಗಳು ಸುಲಭವಾಗಿ ಹಾಗೂ ಅನಿಯಮಿತವಾಗಿ ಲಭ್ಯವಿರುವ ಕಾರಣ ವಿದ್ಯಾರ್ಥಿಗಳ ಅತಿ ಸಂವೇದನಾಶೀಲ ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದ್ದರಿಂದ ಇವನ್ನು ತಡೆಗಟ್ಟಬೇಕು ಎಂದು ತಿಳಿಸಿತು. ಅಶ್ಲೀಲ ವಿಷಯಗಳನ್ನು ಹೊಂದಿರುವ ವೆಬ್‌ಸೈಟ್‌ಗಳನ್ನು ನಿಷೇಧಿಸುವ ಕುರಿತು ಮೂರು ವರ್ಷಗಳ ಹಿಂದೆ ಕೇಂದ್ರ ಸರಕಾರ ಜಾರಿಗೊಳಿಸಿರುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಂಟರ್‌ನೆಟ್ ಸೇವೆಗಳನ್ನು ಒದಗಿಸುವ ಸಂಸ್ಥೆಗಳಿಗೆ ಕೋರ್ಟ್ ಆದೇಶ ನೀಡಿದ್ದು ಯಾವುದೇ ರೀತಿಯಲ್ಲಿ ಅಶ್ಲೀಲ ಸಾಹಿತ್ಯಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದನ್ನು ತಡೆಗಟ್ಟುವಂತೆ ಸೂಚಿಸಿದೆ.

2000ದಲ್ಲಿ ಜಾರಿಗೆ ಬಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 25ರ ಪ್ರಕಾರ ಈ ಸೂಚನೆಗಳನ್ನು ಉಲ್ಲಂಘಿಸುವ ಇಂಟರ್‌ನೆಟ್ ಸಂಸ್ಥೆಗಳ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.ಅಲ್ಲದೆ 2015ರ ಜುಲೈ 31ರಂದು ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಹಾಗೂ ಟೆಲಿಕಮ್ಯುನಿಕೇಷನ್ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಎಲ್ಲಾ ಇಂಟರ್‌ನೆಟ್ ಒದಗಿಸುವ ಸಂಸ್ಥೆಗಳಿಗೆ ಕಳುಹಿಸಲಾಗಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೈಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News