ಒಡಿಶಾ ವಕೀಲರ ಮುಷ್ಕರಕ್ಕೆ ಸುಪ್ರೀಂ ನಿರ್ಬಂಧ
ಹೊಸದಿಲ್ಲಿ,ಸೆ.28: ಒಡಿಶಾ ಉಚ್ಚ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳ ವಕೀಲರು ನಡೆಸುತ್ತಿರುವ ಮುಷ್ಕರವನ್ನು ನಿರ್ಬಂಧಿಸಿರುವ ಉಚ್ಚ ನ್ಯಾಯಾಲಯವು,ಕಕ್ಷಿದಾರರು ನ್ಯಾಯ ಪಡೆಯುವಲ್ಲಿ ಯಾವುದೇ ತೊಂದರೆಯಾಗದಂತಿರಲು ತಮ್ಮ ಕೆಲಸವನ್ನು ಪುನರಾರಂಭಿಸುವಂತೆ ಅವರಿಗೆ ಸೂಚಿಸಿದೆ.
ಒಡಿಶಾದ ಪ್ರಸಿದ್ಧ ಕೋನಾರ್ಕ್ ದೇವಸ್ಥಾನದ ವಿರುದ್ಧ ಅವಮಾನಕಾರಿ ಟೀಕೆಗಳನ್ನು ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಪತ್ರಕರ್ತ ಅಭಿಜಿತ್ ಅಯ್ಯರ್ ಮಿತ್ರಾ ಅವರು ವಕೀಲರ ಸಂಘ ಮತ್ತು ಪೊಲೀಸರ ನಡುವೆ ವಿವಾದದ ಹಿನ್ನೆಲೆಯಲ್ಲಿ ಒಡಿಶಾ ಉಚ್ಚ ನ್ಯಾಯಾಲಯದ ವಕೀಲರು ಆ.29ರಿಂದ ಮುಷ್ಕರದಲ್ಲಿ ತೊಡಗಿರುವುದರಿಂದ ಇಲ್ಲಿಯ ಮಹಾನಗರ ನ್ಯಾಯಾಲಯದಿಂದ ಮಧ್ಯಂತರ ಜಾಮೀನನ್ನು ಪಡೆದುಕೊಂಡಿದ್ದರು. ಅವರು ನಿಯಮಿತ ಜಾಮೀನು ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭ ಮು.ನ್ಯಾ.ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರ ಪೀಠವು ಈ ನಿರ್ದೇಶವನ್ನು ಹೊರಡಿಸಿದೆ.
ಪೀಠವು ಮಿತ್ರಾ ಅವರು ಒಡಿಶಾ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ಅವರ ಮಧ್ಯಂತರ ಜಾಮೀನಿನ ಅವಧಿಯನ್ನು ಅ.5ರವರೆಗೆ ವಿಸ್ತರಿಸಿದೆ.
ಪೊಲೀಸರು ಮತ್ತು ವಕೀಲರ ನಡುವೆ ವಿವಾದಕ್ಕೆ ಕಾರಣವಾಗಿರುವ ಪ್ರಕರಣದ ತನಿಖೆಯನ್ನು ಐಜಿಪಿಗೆ ಹಸ್ತಾಂತರಿಸುವಂತೆ ಒಡಿಶಾ ಡಿಜಿಪಿಗೆ ಸರ್ವೋಚ್ಚ ನ್ಯಾಯಾಲಯವು ನಿರ್ದೇಶ ನೀಡಿದೆ. ಅಲ್ಲದೆ ಮಿತ್ರಾ ಅವರು ಭದ್ರತೆಯನ್ನು ಕೋರಿದರೆ ಒದಗಿಸುವಂತೆಯೂ ಸೂಚಿಸಿದೆ.