ಅಲಿಗಡ ಎನ್‌ಕೌಂಟರ್: ಹತ ವ್ಯಕ್ತಿಯ ಕುಟುಂಬ ಸದಸ್ಯರ ‘ಅಪಹರಣ’ಕ್ಕಾಗಿ 10 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಅಲಿಗಡ(ಉ.ಪ್ರ),ಸೆ.28: ಇಬ್ಬರು ಶಂಕಿತ ಕ್ರಿಮಿನಲ್‌ಗಳನ್ನು ನಕಲಿ ಎನ್‌ಕೌಂಟರ್ ನಡೆಸಿ ಕೊಲ್ಲಲಾಗಿದೆ ಎಂಬ ವಿವಾದವು ಹೊಸ ತಿರುವನ್ನು ಪಡೆದುಕೊಂಡಿದೆ. ಹತ ವ್ಯಕ್ತಿಗಳಲ್ಲೋರ್ವನ ಕುಟುಂಬ ಸದಸ್ಯರನ್ನು ಅಪಹರಿಸಿರುವ ಆರೋಪದಲ್ಲಿ ಅಲಿಗಡ ಮುಸ್ಲಿಂ ವಿವಿ(ಅಮು) ಮತ್ತು ಜೆಎನ್‌ಯು ವಿದ್ಯಾರ್ಥಿ ನಾಯಕರು ಸೇರಿದಂತೆ ‘ಯುನೈಟೆಡ್ ಅಗೇಸ್ಟ್ ಹೇಟ್’ ವೇದಿಕೆಯ 10 ಕಾರ್ಯಕರ್ತರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮ್ಮ ತಲೆಗಳ ಮೇಲೆ ತಲಾ 25,000 ರೂ.ಬಹುಮಾನವನ್ನು ಹೊತ್ತಿದ್ದ ಶಂಕಿತ ಕ್ರಿಮಿನಲ್‌ಗಳಾದ ಮುಸ್ತಕೀಮ್(22) ಮತ್ತು ನೌಷಾದ್ ಅವರು ಸೆ.20ರಂದು ಇಲ್ಲಿಯ ಹರ್ದುವಾಗಂಜ್ ಪ್ರದೇಶದಲ್ಲಿ ಪೊಲೀಸರು ನಡೆಸಿದ್ದ ಎನಕೌಂಟರ್‌ನಲ್ಲಿ ಬಲಿಯಾಗಿದ್ದರು.
ಮುಸ್ತಕೀಮ್‌ನ ಪತ್ನಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಗುರುವಾರ ಇಲ್ಲಿಯ ಅತ್ರ್‌ಲಿ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದರು. ಮುಸ್ತಕೀಮ್‌ನ ತಾಯಿ ಮತ್ತು ಅಜ್ಜಿಯನ್ನು ಅಪಹರಿಸಿರುವ ಆರೋಪವನ್ನು ಕಾರ್ಯಕರ್ತರ ವಿರುದ್ಧ ಹೊರಿಸಲಾಗಿದೆ.
ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಕಾರ್ಯಕರ್ತರ ಗುಂಪಿನಲ್ಲಿದ್ದರಾದರೂ ದೂರಿನಲ್ಲಿ ಅವರ ಹೆಸರನ್ನು ಸೇರಿಸಲಾಗಿಲ್ಲ. ‘ಅಮು’ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಮಸ್ಖೂರ್ ಉಸ್ಮಾನ್ ಮತ್ತು ಫೈಝುಲ್ ಹಸನ್ ಆರೋಪಿಗಳಲ್ಲಿ ಸೇರಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಸನ್,ಗುರುವಾರ ಕಾರ್ಯಕರ್ತರು ಮುಸ್ತಕೀಮ್ ಮನೆಗೆ ತೆರಳಿ ನ್ಯಾಯಕ್ಕಾಗಿ ಹೋರಾಟದಲ್ಲಿ ಸಾಧ್ಯವಿರುವ ಎಲ್ಲ ಕಾನೂನು ನೆರವನ್ನು ಒದಗಿಸುವುದಾಗಿ ಕುಟುಂಬ ಸದಸ್ಯರಿಗೆ ಭರವಸೆ ನೀಡಿದ್ದರು ಎಂದು ತಿಳಿಸಿದರು.
ಗುಂಪು ಬಳಿಕ ಅತ್ರ್‌ಲಿ ಪೊಲೀಸ್ ಠಾಣೆಗೆ ತೆರಳಿ ಮುಸ್ತಕೀನ್ ಕುಟುಂಬದ ಸದಸ್ಯರಿಗೆ ಪೊಲೀಸರಿಂದ ಕಿರುಕುಳವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿತ್ತು. ಈ ವೇಳೆ ಕೆಲವು ಸ್ಥಳೀಯ ಹಿಂದುತ್ವ ಗುಂಪುಗಳ ನಾಯಕರು ಠಾಣೆಗೆ ಆಗಮಿಸಿದ್ದು,ಅಲ್ಲಿಂದ ತೆರಳುವಂತೆ ಗುಂಪನ್ನು ಗದರಿಸಿದ್ದರು. ಇದು ವ್ಯಾಗ್ಯುದ್ಧಕ್ಕೆ ಕಾರಣವಾಗಿದ್ದು,ಪೊಲೀಸರು ಮಧ್ಯೆ ಪ್ರವೇಶಿಸುವಂತಾಗಿತ್ತು. ಬಳಿಕ ಮುಸ್ತಕೀನ್‌ನ ತಾಯಿ ಶಬಾನಾ ಮತ್ತು ಅಜ್ಜಿ ರಫೀಖುನಾ ಅವರು ದಿಲ್ಲಿಗೆ ತೆರಳಲಿದ್ದ ಗುಂಪಿನ ಜೊತೆ ಹೋಗಿದ್ದರು.
ಘಟನೆ ಹಿನ್ನೆಲೆ:
ಬೈಕಿನಲ್ಲಿ ಸಂಚರಿಸುತ್ತಿದ್ದ ಮುಸ್ತಕೀನ್ ಮತ್ತು ನೌಷಾದ್‌ರನ್ನು ನಿಲ್ಲುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಅವರು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದರು. ಪೊಲೀಸರು ಪ್ರತಿದಾಳಿ ನಡೆಸಿದ್ದು,ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಈ ತಿಂಗಳ ಪೂರ್ವಾರ್ಧದಲ್ಲಿ ನಡೆದಿದ್ದ ಇಬ್ಬರು ಸಾಧುಗಳ ಹತ್ಯೆಗಳಲ್ಲಿ ತಾವು ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದರು ಎಂದು ಎಸ್‌ಎಸ್‌ಪಿ ಅಜಯ ಸಾಹನಿ ಹೇಳಿದ್ದರು. ಪೊಲೀಸರ ಹೇಳಿಕೆಯನ್ನು ತಿರಸ್ಕರಿಸಿರುವ ನೌಷಾದ್ ತಾಯಿ ಶಹೀನ್,ಅವರಿಬ್ಬರೂ ಯಾವುದೇ ಕ್ರಿಮಿನಲ್ ಇತಿಹಾಸ ಹೊಂದಿರಲಿಲ್ಲ ಎಂದಿದ್ದಾರೆ.
ಇದೊಂದು ನಕಲಿ ಎನ್‌ಕೌಂಟರ್ ಆಗಿದೆ ಎಂದು ಆರೋಪಿಸಿದ್ದ ಬಿಎಸ್‌ಪಿ ಮತ್ತು ಕಾಂಗ್ರೆಸ್,ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದವು.