ಬಿಜೆಪಿ ನಾಯಕನ ಹತ್ಯೆ ಪ್ರಕರಣ: ಮುಖ್ಯ ಸಾಕ್ಷಿಯ ಗುಂಡಿಟ್ಟು ಹತ್ಯೆ

Update: 2018-09-28 14:59 GMT

ಅರ, ಸೆ.28: ಬಿಜೆಪಿ ನಾಯಕ ವಿಶ್ವೇಶ್ವರ ಓಜಾ ಹತ್ಯೆಯ ಮುಖ್ಯ ಸಾಕ್ಷಿಯನ್ನು ಬಿಹಾರದ ಭೊಜ್‌ಪುರ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಶುಕ್ರವಾರ ಗುಂಡಿಟ್ಟು ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಂಡು ಹಾರಾಟದ ವಿರುದ್ಧ ಎಚ್ಚರಿಸಿದ ಇನ್ನೊರ್ವ ವ್ಯಕ್ತಿಗೂ ಗುಂಡೇಟು ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರ ಬಿಜೆಪಿ ಉಪಾಧ್ಯಕ್ಷರಾಗಿದ್ದ ವಿಶ್ವೇಶ್ವರ ಓಜಾ 2015ರಲ್ಲಿ ಶಹಪುರ ಕ್ಷೇತ್ರದಿಂದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

ಅವರನ್ನು 2016ರ ಫೆಬ್ರವರಿಯಲ್ಲಿ ಭೊಜ್‌ಪುರ ಜಿಲ್ಲೆಯ ಶಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೊನ್ವರ್ಶ ಮತ್ತು ಪರ್ಸೌರ ಗ್ರಾಮಗಳ ಮಧ್ಯೆ ಮುಸುಕುಧಾರಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಓಜಾ ಹತ್ಯೆಯ ಪ್ರಮುಖ ಸಾಕ್ಷಿ ಕಮಲ್ ಕೊಶೋರ್ ಮಿಶ್ರಾರನ್ನೂ ಇದೀಗ ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಶುಕ್ರವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಮಿಶ್ರಾ ತನ್ನ ಹಸುಗಳಿಗಾಗಿ ಮೇವನ್ನು ತರುತ್ತಿದ್ದ ವೇಳೆ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಮಿಶ್ರಾ ಜೊತೆಗಿದ್ದ ಅಮರಕಾಂತ್ ಮಿಶ್ರಾ ಗ್ರಾಮಸ್ಥರನ್ನು ಕರೆಯಲು ಯತ್ನಿಸಿದಾಗ ದುಷ್ಕರ್ಮಿಗಳು ಅವರ ಮೇಲೂ ಗುಂಡು ಹಾರಿಸಿದ್ದಾರೆ. ಮಿಶ್ರಾ ಈ ವರ್ಷದ ಆರಂಭದಲ್ಲಿ ತನ್ನ ಹೇಳಿಕೆಯನ್ನು ನ್ಯಾಯಾಲಯದಲ್ಲಿ ನೀಡಿದ್ದರು. ನಂತರ ಅವರ ಮನವಿಯ ಮೇರೆಗೆ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News