ಇಂಗ್ಲಿಷ್ ಮಾನಸಿಕತೆ ಒಂದು ಕಾಯಿಲೆ, ಭಾಷೆಯಲ್ಲ: ವೆಂಕಯ್ಯ ನಾಯ್ಡು
ಪಣಜಿ, ಸೆ.28: ಇಂಗ್ಲಿಷ್ ಮಾನಸಿಕತೆ ಒಂದು ಕಾಯಿಲೆಯಾಗಿದೆ, ಅದು ಭಾಷೆಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಶುಕ್ರವಾರ ತಿಳಿಸಿದ್ದು ದೇಶವು ಅದರ ಶ್ರೀಮಂತ ಪರಂಪರೆಯ ಬಗ್ಗೆ ಹೆಮ್ಮೆಪಡಬೇಕು ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು ಹೊಸದಿಲ್ಲಿಯಲ್ಲಿ ನಡೆದ ಹಿಂದಿ ದಿನದ ಸಮಾರಂಭದಲ್ಲಿ ಮಾತನಾಡುವ ವೇಳೆ ನಾಯ್ಡು, ಇಂಗ್ಲಿಷ್ ಬ್ರಿಟಿಷರು ಹೋದ ಒಂದು ಕಾಯಿಲೆ ಎಂದು ತಿಳಿಸಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಹಳಷ್ಟು ಹೇಳಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ನಾಯ್ಡಿ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಾನು ಮಾತೃಭಾಷೆಯನ್ನು ರಕ್ಷಿಸುವ ಮತ್ತು ಪ್ರೋತ್ಸಾಹಿಸುವ ಬಗ್ಗೆ ಮಾತನಾಡಿದರೆ ಮಾಧ್ಯಮದ ಒಂದು ವರ್ಗ ನಾನು ಇಂಗ್ಲಿಷ್ ಒಂದು ರೋಗ ಎಂದು ಹೇಳಿರುವುದಾಗಿ ಬರೆಯಿತು. ನಾನು ಇಂಗ್ಲಿಷ್ ಒಂದು ರೋಗ ಎಂದು ಹೇಳಿಲ್ಲ ಎಂದು ನಾಯ್ಡು ಸ್ಪಷ್ಟಪಡಿಸಿದ್ದಾರೆ. ಇಂಗ್ಲಿಷ್ ಕಾಯಿಲೆಯಲ್ಲ, ಆದರೆ ಬ್ರಿಟಿಷರಿಂದ ಬಳುವಳಿಯಾಗಿ ಪಡೆದುಕೊಂಡಿರುವ ಇಂಗ್ಲಿಷ್ ಮಾನಸಿಕತೆ ಕಾಯಿಲೆಯಾಗಿದೆ ಎಂದು ನಾಯ್ಡು ತಿಳಿಸಿದ್ದಾರೆ. ಗೋವಾದಲ್ಲಿ ನಡೆದ ರಾಷ್ಟ್ರೀಯ ತಾಂತ್ರಿ ಸಂಸ್ಥೆಯ ನಾಲ್ಕನೇ ಘಟಿಕೋತ್ಸವದಲ್ಲಿ ಮಾತನಾಡುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
ಬ್ರಿಟಿಷರು ಭಾರತವನ್ನು ಬಿಟ್ಟು ತೆರಳಿದ್ದಾರೆ. ಆದರೆ ಅವರು ಒಂದು ರೀತಿಯ ಕೀಳರಿಮೆ ಭಾವವನ್ನು ಸೃಷ್ಟಿಸಿದ್ದಾರೆ. ಬ್ರಿಟಿಷರು ಶ್ರೇಷ್ಟರು, ವಿದೇಶಿಗರು ಶ್ರೇಷ್ಟರು ನಾವು ಏನೂ ಅಲ್ಲ ಎಂಬ ಭಾವನೆಯನ್ನು ಅವರು ಬಿತ್ತಿದ್ದಾರೆ ಎಂದು ನಾಯ್ಡು ವಿಷಾದಿಸಿದ್ದಾರೆ.