×
Ad

ಪ್ರಧಾನಿಯಿಂದ ‘ಪರಾಕ್ರಮ್ ಪರ್ವ್’ ಉದ್ಘಾಟನೆ

Update: 2018-09-28 20:43 IST

ಜೋಧಪುರ, ಸೆ. 27: ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ಪಡೆ ನಡೆಸಿದ ಸರ್ಜಿಕಲ್ ದಾಳಿಯ ಎರಡನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಜೋಧಪುರದಲ್ಲಿರುವ ಮಿಲಿಟರಿ ಸ್ಟೇಷನ್‌ನಲ್ಲಿ ವಸ್ತು ಪ್ರದರ್ಶನ ‘ಪರಾಕ್ರಮ್ ಪರ್ವ’ವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು. ಮಿಲಿಟರಿ ಸ್ಟೇಶನ್‌ನಲ್ಲಿರುವ ಬ್ಯಾಟ್ಲ್ ಆಕ್ಸೆ ಮೈದಾನಕ್ಕೆ ಆಗಮಿಸಿದ ಪ್ರಧಾನಿ ಮೊದಲು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂದೇಶಕ್ಕೆ ಸಹಿ ಹಾಕಿದರು. ಅನಂತರ ಭಾರತದ ಸೇನಾ ಪಡೆಯ ಸಮರ ಸಾಮರ್ಥ್ಯವನ್ನು ಪ್ರದರ್ಶಿಸುವ ವಸ್ತುಪ್ರದರ್ಶನ ಉದ್ಘಾಟಿಸಿದರು. 

ಪ್ರಧಾನಿ ಅವರು ಇಲ್ಲಿ ಕೊನಾರ್ಕ್ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು. ಪ್ರಧಾನಿ ಅವರ ಜೊತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಇದ್ದರು. ಉರಿ ವಲಯದಲ್ಲಿ ದಾಳಿ ನಡೆಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನಾ ಪಡೆ 2016 ಸೆಪ್ಟಂಬರ್ 29ರಂದು ಗಡಿ ನಿಯಂತ್ರಣ ರೇಖೆಯಲ್ಲಿ ಸರ್ಜಿಕಲ್ ದಾಳಿ ನಡೆಸಿ ಭಯೋತ್ಪಾದಕರನ್ನು ಹತ್ಯೆಗೈದಿತ್ತು. ಯೋಧರ ಶೌರ್ಯವನ್ನು ನೆನಪಿಸಲು ಸೆಪ್ಟಂಬರ್ 28ರಿಂದ 30ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕಳೆದ ವಾರ ರಕ್ಷಣಾ ಸಚಿವರು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News