ಆಧಾರ್ ಲಿಂಕ್ ಮಾಡಿರುವ ಯುದ್ಧ ವಿಮಾನ!

Update: 2018-09-29 18:33 GMT

  ಪಾಕಿಸ್ತಾನದ ಕಡೆಗೆ ಹಾರಿಸಲೆಂದು ಖರೀದಿಸಿದ ರಫೇಲ್ ಯುದ್ಧ ವಿಮಾನಗಳು ತನ್ನ ಕಡೆಗೆ ಹಾರುತ್ತಿರುವುದನ್ನು ನೋಡಿ ಪ್ರಧಾನಿ ಮೋದಿಯವರು ಹೌಹಾರಿ, ವಿಮಾನದಲ್ಲೇ ಕಾಲ ಕಳೆಯ ತೊಡಗಿದರು.

ಪತ್ರಕರ್ತ ಎಂಜಲು ಕಾಸಿ ನರೇಂದ್ರ ಮೋದಿಯವರ ಸಂದರ್ಶನ ಮಾಡಲು ಸಾಧ್ಯವಾಗದೇ ಇರುವುದರಿಂದ ರಫೇಲ್ ಕುರಿತಂತೆ ಯಾರಾದರೂ ಮಾತನಾಡುವವರು ಸಿಗುತ್ತಾರೆಯೋ ಎಂದು ಪಾರ್ಲಿಮೆಂಟ್‌ನ ಜಗಲಿಯಲ್ಲಿ ಸಚಿವರಿಗಾಗಿ ಓಡಾಡ ತೊಡಗಿದ. ಎಲ್ಲರೂ ಮುಖ ಮರೆಸಿ ಓಡಾಡುತ್ತಿದ್ದರು. ಸರಿ, ಏನು ಮಾಡುವುದು? ನರೇಂದ್ರ ಮೋದಿಯವರ ನಿವಾಸದ ಕಡೆಗೆ ನಡೆದ. ಅಲ್ಲಿ ವಾಚ್‌ಮೆನ್ ‘‘ಸಾಹೇಬರು ಇಲ್ಲ’’ ಎಂದು ಬಿಟ್ಟ. ‘‘ಯಾರಾದ್ರೂ ಸರಿ, ನನಗೊಂದು ಸಂದರ್ಶನ ಬೇಕು’’ ಎಂಜಲು ಕಾಸಿ ವಾಚ್‌ಮ್ಯಾನ್ ಬಳಿ ಕೋರಿಕೊಂಡ. ವಾಚ್‌ಮ್ಯಾನ್ ವಾಚ್‌ನ್ನು ಒಮ್ಮೆ ನೋಡಿ....‘‘ಸರಿ, ಬೇಗ ಮುಗಿಸಿ...ನಾನೇ ಸಂದರ್ಶನ ನೀಡುತ್ತೇನೆ’’ ಎಂದು ಬಿಟ್ಟ.
‘‘ನೀನು ಸಂದರ್ಶನ ನೀಡುವುದೇ? ಅದೂ ಪ್ರಧಾನಿಯ ಬದಲಿಗೆ...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಪ್ರಧಾನಿ ಎಂದರೆ ಚೌಕೀದಾರ್. ಚೌಕೀದಾರ್ ಎಂದರೆ ಪ್ರಧಾನಿ. ಸದ್ಯಕ್ಕೆ ಸಾಹೇಬರು ಇಲ್ಲದೇ ಇರುವುದರಿಂದ, ಚೌಕೀದಾರ್ ಆಗಿರುವ ನನ್ನನ್ನೇ ಪ್ರಧಾನಿಯೆಂದು ಭಾವಿಸಿ ಎಲ್ಲರೂ ಸಂದರ್ಶನ ಮಾಡಿಕೊಂಡು ಹೋಗುತ್ತಿದ್ದಾರೆ. ನೀವು ಕೂಡ ಸಂದರ್ಶನ ಮಾಡಬಹುದು...’’
‘‘ರಫೇಲ್ ಬಗ್ಗೇನೂ ಪ್ರಶ್ನೆ ಕೇಳಬಹುದಾ...’’ ಕಾಸಿ ಆತಂಕದಿಂದ ಕೇಳಿದ.

‘‘ನೋಡ್ರೀ....ರಫೇಲ್ ವಿಮಾನದ ಮಹತ್ವದ ಕುರಿತಂತೆ ಇತ್ತೀಚೆಗೆ ದೇಶದ ಎಲ್ಲ ಭಕ್ತರಿಗೆ ನಾನು ಉಪನ್ಯಾಸ ನೀಡಿದ್ದೆ. ನಿಮ್ಮ ರಾಜ್ಯದ ಅದ್ಯಾವುದೋ ಬೇಳೆ ಸೂಲಿಗೆ ಅದರ ಸಮಗ್ರ ತಂತ್ರಜ್ಞಾನವನ್ನು ತರಬೇತಿಗೊಳಿಸಿ ಕಳುಹಿಸಿದ್ದೆ. ರಫೇಲ್ ಯುದ್ಧ ವಿಮಾನವನ್ನು ಓಡಿಸಲು ಅವರು ಅತ್ಯುತ್ಸುಕರಾಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಡ್ರೈವಿಂಗ್ ಸ್ಕೂಲಿಗೆ ಸೇರಿದ್ದಾರೆ....ಚುನಾವಣೆಯ ಹೊತ್ತಿಗೆ ಅವರು ರಫೇಲ್ ಯುದ್ಧ ವಿಮಾನವನ್ನು ಓಡಿಸಲಿದ್ದಾರೆ....’’ ಚೌಕೀದಾರ್ ಗುಟ್ಟೊಂದನ್ನು ಬಿಟ್ಟುಕೊಟ್ಟ. ಕಾಸಿಗೆ ಸಂತೃಪ್ತಿಯಾಯಿತು. ಬೇಳೆಸೂಲಿಯನ್ನೇ ತರಬೇತಿಗೊಳಿಸಿದ್ದಾನೆ ಎಂದ ಮೇಲೆ ಈ ಚೌಕಿದಾರ್ ರಫೇಲ್ ಯುದ್ಧವಿಮಾನದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿದ್ದಾನೆ ಎಂದಾಯಿತು. ‘‘ಸಾರ್...ನಿಮಗೆ ಇಷ್ಟೆಲ್ಲ ಮಾಹಿತಿ ಎಲ್ಲಿಂದ...’’
‘‘ಮೋದಿ ಸಾಹೇಬರು ಎಲ್ಲವನ್ನು ನನಗೆ ವಿವರಿಸಿ, ನಾನಿಲ್ಲದಾಗ ಪತ್ರಕರ್ತರನ್ನು ಸಂಭಾಳಿಸಲು ಹೇಳಿದ್ದಾರೆ....ಸದ್ಯಕ್ಕೆ ಅವರ ನಿವಾಸದ ಮಾತ್ರವಲ್ಲ, ಇಡೀ ದೇಶದ ಚೌಕೀದಾರ್ ನಾನೇ. ಪ್ರಶ್ನೆ ಕೇಳಿ...’’ ಚೌಕೀದಾರ್ ಆದೇಶಿಸಿದ.
‘‘ಅಲ್ಲ...ರಫೇಲ್ ಯುದ್ಧ ವಿಮಾನವನ್ನು ಭಾರೀ ದುಬಾರಿ ಹಣ ಕೊಟ್ಟು ತೆಗೆದುಕೊಂಡಿದ್ದಾರೆ. ಇದರಿಂದ ದೇಶಕ್ಕೆ ತುಂಬಾ ನಷ್ಟ ಆಗಿದೆ ಎಂದು ಹೇಳುತ್ತಿದ್ದಾರೆ...’’ ಕಾಸಿ ಕೇಳಿದ.

ಚೌಕೀದಾರ್ ತನ್ನ ಪ್ಯಾಂಟ್‌ನ್ನು ಎಳೆದು ಸರಿಪಡಿಸಿಕೊಂಡು, ದೊಣ್ಣೆಯನ್ನು ಕಂಕುಳಲ್ಲಿ ಇಟ್ಟುಕೊಂಡು ಮಾತಿಗೆ ತೊಡಗಿದ. ‘‘ನೋಡಿ...ಮೋದಿಯವರು ಪ್ರಧಾನಿಯಾಗಿದ್ದಾರೆ ಎಂದ ಮೇಲೆ ಕಡಿಮೆ ಬೆಲೆಯ ಯುದ್ಧವಿಮಾನ ತೆಗೆದುಕೊಂಡರೆ ಅವರ ವರ್ಚಸ್ಸಿಗೆ ಅವಮಾನ. ಅವರ ವರ್ಚಸ್ಸಿಗೆ ಅವಮಾನವಾದರೆ ದೇಶದ ವರ್ಚಸ್ಸಿಗೆ ಅವಮಾನ. ವಿಶ್ವದಲ್ಲೇ ಅತಿ ದೊಡ್ಡ ಪಟೇಲ್ ಪ್ರತಿಮೆ, ಅತಿ ದೊಡ್ಡ ಶಿವಾಜಿ ಪ್ರತಿಮೆ, ಬುಲೆಟ್ ಟ್ರೇನ್ ಇವೆಲ್ಲದರ ಮೂಲಕ ದೇಶ ವಿಶ್ವದ ಗಮನ ಸೆಳೆಯುತ್ತಿರುವಾಗ, ಕಡಿಮೆ ಬೆಲೆಯ ರಫೇಲ್ ವಿಮಾನ ತೆಗೆದುಕೊಂಡರೆ ದೇಶದ ಮರ್ಯಾದೆ ಏನಾಗಬೇಕು? ಅದಕ್ಕಾಗಿ ಹಿಂದಿನವರು ಖರೀದಿಸಿದ ಅಗ್ಗದ ವಿಮಾನ ಬದಿಗಿಟ್ಟು ಹೊಸ ದುಬಾರಿ ವಿಮಾನ ಖರೀದಿಸಿದ್ದಾರೆ. ಇದರಿಂದಾಗಿ ಭಾರತ ಭಾರೀ ಶ್ರೀಮಂತ ರಾಷ್ಟ್ರ ಎಂದು ವಿಶ್ವ ನಂಬುವಂತಾಗಿದೆ. ಪಾಕಿಸ್ತಾನಕ್ಕೆ ತೀವ್ರ ಮುಜುಗರವಾಗಿದೆ....’’ ತನ್ನ ಸಂಶೋಧನೆಯನ್ನು ಚೌಕೀದಾರ್ ತೆರೆದಿಟ್ಟ.
‘‘ಈ ವಿಮಾನದಲ್ಲಿ ವಿಶೇಷ ಏನಿದೆ?’’ ಕಾಸಿ ಕೇಳಿದ.
‘‘ಮೋದಿಯವರು ಈ ಒಪ್ಪಂದಕ್ಕೆ ಸಹಿ ಹಾಕಿರುವುದೇ ಮೊದಲ ವಿಶೇಷ. ಹಾಗೆಯೇ ಈ ವಿಮಾನಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿದೆ. ಆಧಾರ್ ಕಾರ್ಡ್ ಲಿಂಕ್ ಮಾಡಲಾದ ಭಾರತದ ಮೊತ್ತ ಮೊದಲ ವಿಮಾನ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...ಇದಕ್ಕಿಂತ ಇನ್ನೇನು ಬೇಕು?’’
‘‘ಯುದ್ಧವಾಗುವಾಗ ಈ ಆಧಾರ್ ಕಾರ್ಡ್ ಲಿಂಕ್‌ನಿಂದ ಏನು ಪ್ರಯೋಜನ....?’’ ಕಾಸಿ ಅರ್ಥವಾಗದೇ ಕೇಳಿದ.
ಈಗ ಚೌಕೀದಾರ್ ಮೆಲ್ಲನೆ ಕಾಸಿಯ ಬಳಿ ಗುಟ್ಟಾಗಿ ಹೇಳ ತೊಡಗಿದ ‘‘ನೋಡ್ರೀ...ಈ ಪಾಕಿಸ್ತಾನದ ಯಾವುದೇ ಯುದ್ಧ ವಿಮಾನಗಳು ಆಧಾರ್ ಕಾರ್ಡ್ ಲಿಂಕ್ ಮಾಡ್ಸಿಕೊಂಡಿಲ್ಲ. ನಾಳೆ ಭಾರತ-ಪಾಕಿಸ್ತಾನ ಯುದ್ಧವಾದಾಗ ವಿಶ್ವಸಂಸ್ಥೆ ‘ಆಧಾರ್ ಕಾರ್ಡ್’ ಲಿಂಕ್ ಮಾಡದ ಯುದ್ಧ ವಿಮಾನಗಳನ್ನು ಯುದ್ಧದಲ್ಲಿ ಬಳಸಬಾರದು ಎಂದು ಆದೇಶ ನೀಡುತ್ತದೆ....ಆಗ ಪಾಕಿಸ್ತಾನ ಮತ್ತೆ ಆಧಾರ್ ಕಚೇರಿ ಮುಂದೆ ಕ್ಯೂ ನಿಂತು, ಆಧಾರ್‌ಗೆ ಲಿಂಕ್ ಮಾಡುವಷ್ಟರಲ್ಲಿ ಭಾರತ ಯುದ್ಧ ಗೆದ್ದಾಗುತ್ತದೆ. ಹೇಗಿದೆ ನಮ್ಮ ಪ್ರಧಾನಿಯವರ ದೂರದೃಷ್ಟಿ...?’’ ಚೌಕೀದಾರ್ ಪ್ರಶ್ನಿಸಿದ.
 ಕಾಸಿಯೂ ಇದರಿಂದ ರೋಮಾಂಚನಗೊಂಡ. ಆದರೆ ಪ್ರಶ್ನೆ ಮುಗಿಯಲಿಲ್ಲ ‘‘ಸಾರ್...ಈ ದೇಶದ ಹಿಂದೂಸ್ಥಾನ್ ಏರೋನಾಟಿಕ್ಸ್ ಅವರ ಕೈಯಿಂದ ರಿಲಯನ್ಸ್ ಕಂಪೆನಿಗೆ ಒಪ್ಪಂದ ಕೊಟ್ಟದ್ದರಿಂದ ದೇಶಕ್ಕೆ ನಷ್ಟ ಆಗಿದೆ. ಅಂಬಾನಿಗೆ ಲಾಭ ಆಗಿದೆ ಎಂದೆಲ್ಲ ಹೇಳುತ್ತಾರೆ...’’
 ‘‘ನೋಡ್ರೀ...ಅಂಬಾನಿಯವರು ಈ ದೇಶಕ್ಕಾಗಿ ಜೀಯೋವನ್ನು ಪುಕ್ಕಟೆಯಾಗಿ ಕೊಡುವ ಮೂಲಕ ಏನೆಲ್ಲ ತ್ಯಾಗ ಮಾಡಿದ್ದಾರೆ....ಅವರ ಬಗ್ಗೆ ಹೀಗೆಲ್ಲ ಆರೋಪ ಸರಿಯಲ್ಲ. ಪೆಟ್ರೋಲ್, ಮೊಬೈಲ್ ಎಲ್ಲ ಇರೋದು ಅಂಬಾನಿಯವರ ಕೈಯಲ್ಲಿ. ಆದುದರಿಂದ ಇಡೀ ಸೇನೆಯ ನೇತೃತ್ವವನ್ನೇ ಅವರಿಗೆ ಕೊಡುವ ಯೋಜನೆಯೂ ಒಂದು ಉಂಟು. ನನ್ನಲ್ಲಿ ಈ ಬಗ್ಗೆ ಮೋದಿಯವರು ಸಣ್ಣದಾಗಿ ಪ್ರಸ್ತಾಪಿಸಿದ್ದಾರೆ. ಅಂಬಾನಿ ಮತ್ತು ಪತಂಜಲಿ ಬಾಬಾರವರು ಜೊತೆ ಸೇರಿ...ಭಾರತದ ಸೇನೆಯನ್ನು ಅತ್ಯಾಧುನಿಕ ಗೊಳಿಸಲಿದ್ದಾರೆ. ಬಾಬಾರವರು ಯೋಗದ ಮೂಲಕ ರಫೇಲ್ ಯುದ್ಧ ವಿಮಾನಗಳನ್ನು ಮೇಲೆ ಹಾರಿಸುವ ಭರವಸೆ ನೀಡಿದ್ದಾರೆ....ಇದೆಲ್ಲವನ್ನೂ ಕಾಂಗ್ರೆಸ್‌ನವರು ಮುಚ್ಚಿಟ್ಟು ಅಪಪ್ರಚಾರ ಮಾಡುತ್ತಿದ್ದಾರೆ....’’ ಚೌಕೀದಾರ್ ಖೇದದಿಂದ ಹೇಳಿದ.
‘‘ಪತಂಜಲಿ ಬಾಬಾರವರಿಗೂ ರಫೇಲ್‌ಗೂ ಏನು ಸಂಬಂಧ...’’ ಕಾಸಿ ಅಚ್ಚರಿಯಿಂದ ಕೇಳಿದ.
  ‘‘ಅದರಲ್ಲೇ ಇರುವುದು. ರಫೇಲ್‌ನ ವಿವಿಧ ಭಾಗಗಳನ್ನು ಆಯುರ್ವೇದದ ಮೂಲಕ ತಯಾರು ಮಾಡಲಾಗಿದೆ. ಅಂದರೆ ಪುಷ್ಪಕ ವಿಮಾನಕ್ಕೆ ಬಳಸಿದ ತಂತ್ರಜ್ಞಾನಗಳನ್ನು ಸೇರಿಸಿ ರಫೇಲ್ ಯುದ್ಧ ವಿಮಾನವನ್ನು ತಯಾರಿಸಲಾಗುತ್ತಿದೆ. ಸೈನಿಕರಿಗೆ ನೀಡುವ ಎಲ್ಲ ಮಾಂಸಾಹಾರಗಳನ್ನು ನಿಲ್ಲಿಸಿ, ಸ್ವತಃ ಪತಂಜಲಿ ಕಂಪೆನಿಯಿಂದ ತಯಾರಿಸಿದ ಅಪ್ಪಟ ಸಸ್ಯಾಹಾರವನ್ನು ಒದಗಿಸಿಕೊಡಲಿದ್ದಾರೆ. ಹಾಗೆಯೇ ಬಾಬಾರವರ ನೇತೃತ್ವದಲ್ಲೇ ಕಮಾಂಡೋಗಳಿಗೆ ತರಬೇತಿಗಳನ್ನೂ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಅಪ್ಪಟ ಸ್ವದೇಶಿ ಸೇನೆಯಾಗಿ ಪರಿವರ್ತನೆಯಾಗಲಿದೆ....’’ ಚೌಕೀದಾರ್ ವಿವರಿಸಿದ.
 ‘‘ಮೋದಿಯವರು ಚೌಕೀದಾರ್ ಆಗಿ ವಿಫಲ ಆಗಿದ್ದಾರೆ ಎಂಬ ಆರೋಪ ಇದೆ. ಮಲ್ಯನಂಥವರು ತಪ್ಪಿಸಿಕೊಂಡು ವಿದೇಶದಲ್ಲಿ ಅಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದೇ...’’ ಕಾಸಿ ಪ್ರಶ್ನೆ ಬದಲಿಸಿದ. ಈಗ ಚೌಕೀದಾರ್ ಮುಖ ಸಣ್ಣದಾಯಿತು. ಮೆಲ್ಲನೆ ಕಾಸಿ ಕಿವಿಯ ಬಳಿ ಬಂದು ಹೇಳಿದ ‘‘ಸಾರ್...ಈ ಮೋದಿಯವರ ಮನೆಯನ್ನು ಹಲವು ವರ್ಷಗಳಿಂದ ಕಾಯ್ತೆ ಇದ್ದೇನೆ. ಒಬ್ಬನೇ ಒಬ್ಬ ಕಳ್ಳ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಇದೀಗ ಸಾಹೇಬರು ತಮ್ಮನ್ನು ಚೌಕೀದಾರ್ ಎಂದು ಕರೆದು ಚೌಕೀದಾರರಾಗಿರುವ ನಮ್ಮೆಲ್ಲ ಮರ್ಯಾದೆ ಕಳೆದು ಬಿಟ್ಟರು ಸಾರ್....’’ ಗೋಳೋ ಎಂದು ಅಳತೊಡಗಿದ.

Similar News