ಮೇಡ್ ಇನ್ ಚೀನಾಗೆ ರಾಜ್‌ಕುಮಾರ್ ರಾವ್ ಹೀರೋ

Update: 2018-09-29 18:37 GMT

‘ಸ್ತ್ರೀ’ ಚಿತ್ರದ ಭರ್ಜರಿ ಯಶಸ್ಸಿನ ಗುಂಗಿನಲ್ಲಿರುವ ರಾಜ್‌ಕುಮಾರ್ ರಾವ್, ದಿನೇಶ್ ವಿಜನ್ ನಿರ್ಮಾಣದ ಮತ್ತೊಂದು ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ‘ಮೇಡ್ ಇನ್ ಚೀನಾ’ ಎಂದು ಹೆಸರಿಡಲಾದ ಈ ಚಿತ್ರಕ್ಕೆ ಮಿಕಿಲ್ ಮುಸಾಲ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಅಹ್ಮದಾಬಾದ್‌ನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಾಯಕಿಯಾಗಿ ವೌನಿ ರಾಯ್ ನಟಿಸುತ್ತಿದ್ದಾರೆ. ಹಿರಿಯ ನಟ ಬೊಮ್ಮಾನ್ ಇರಾನಿ ಕೂಡಾ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರ ಮುಂದಿನ ವರ್ಷದ ಸ್ವಾತಂತ್ರ ದಿನಾಚರಣೆಯಂದು ಬಿಡುಗಡೆಗೊಳ್ಳಲಿದೆ. ಸ್ವಾರಸ್ಯಕರವೆಂದರೆ, ರಣಬೀರ್ ಕಪೂರ್, ಆಲಿಯಾಭಟ್ ಅಭಿನಯದ ಬಿಗ್‌ಬಜೆಟ್ ಚಿತ್ರವಾದ ಬ್ರಹ್ಮಾಸ್ತ್ರ ಕೂಡಾ ಆ ದಿನವೇ ರಿಲೀಸ್ ಆಗಲಿದ್ದು, ಈ ಎರಡು ಬಹುನಿರೀಕ್ಷಿತ ಚಿತ್ರಗಳ ನಡುವೆ ಬಾಕ್ಸ್ ಆಫೀಸ್ ಕದನ ನಡೆಯುವುದು ಬಹುತೇಕ ಖಚಿತವಾಗಿದೆ.

ಸ್ತ್ರೀ ಚಿತ್ರದ ಚಿತ್ರೀಕರಣದ ವೇಳೆ, ನಿರ್ಮಾಪಕ ದಿನೇಶ್ ವಿಜನ್ ಅವರು ತನ್ನ ಮುಂದಿನ ಚಿತ್ರ ಮೇಡ್ ಇನ್ ಚೀನಾದ ಕಥೆಯನ್ನು ರಾಜ್‌ಕುಮಾರ್‌ಗೆ ವಿವರಿಸಿದ್ದರಂತೆ. ಚಿತ್ರದ ಕಥೆಯನ್ನು ತುಂಬಾ ಮೆಚ್ಚಿಕೊಂಡ ರಾಜ್‌ಕುಮಾರ್ ಮರುಕ್ಷಣವೇ ಓ.ಕೆ. ಎಂದರೆಂದು ದಿನೇಶ್ ವಿವರಿಸುತ್ತಾರೆ. ರಾಜ್‌ಕುಮಾರ್ ರಾವ್ ಓರ್ವ ಅಪ್ಪಟ ಪ್ರತಿಭಾವಂತ ಕಲಾವಿದ. ಈ ಚಿತ್ರದ ಕಥಾನಾಯಕನ ಪಾತ್ರಕ್ಕೆ ಅವರು ಹೇಳಿಮಾಡಿಸಿದಂತಿದ್ದಾರೆಂದು ನಿರ್ಮಾಪಕ ದಿನೇಶ್ ಹೇಳುತ್ತಾರೆ.

ಟ್ರಾಪ್ಡ್, ಬರೇಲಿ ಕಿ ಬರ್ಫಿ, ನ್ಯೂಟನ್, ಸ್ತ್ರೀ ಸಹಿತ ಸರಣಿ ಹಿಟ್ ಚಿತ್ರಗಳನ್ನು ನೀಡಿರುವ ರಾಜ್‌ಕುಮಾರ್ ರಾವ್ ಮೇಡ್ ಇನ್ ಚೀನಾದಲ್ಲೂ ಪ್ರೇಕ್ಷಕರನ್ನು ಮೋಡಿ ಮಾಡುವುದರಲ್ಲಿ ಸಂದೇಹವಿಲ್ಲವೆಂದು ಚಿತ್ರತಂಡದ ಅಂಬೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News