ದಿಲ್ಲಿ ದರ್ಬಾರ್

Update: 2018-09-29 18:39 GMT

ಅಧಿರ್‌ನ ನೋವು

ಇತ್ತೀಚೆಗೆ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸೊಮೆನ್ ಮಿತ್ರರನ್ನು ನೇಮಿಸಿದರು. ಈ ನಡೆಯು ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ನೀಡಿದ ಸಂದೇಶವೆಂದೇ ವಿಶ್ಲೇಷಿಸಲಾಗಿತ್ತು. ಆದರೆ ಈ ಬದಲಾವಣೆಗಾಗಿ ಅಧಿರ್ ಚೌಧರಿ ತಮ್ಮ ಪದವನ್ನು ತ್ಯಾಗಮಾಡಬೇಕಾಯಿತು. ಅಧಿರ್ ಈ ಹುದ್ದೆಯಲ್ಲಿದ್ದಷ್ಟು ಕಾಲ ಮಮತಾ ಬ್ಯಾನರ್ಜಿಯನ್ನು ಕಟು ಶಬ್ದಗಳಿಂದ ಟೀಕಿಸುತ್ತಲೇ ಬಂದಿದ್ದಾರೆ. ಟಿಎಂಸಿಯ ಪಾರಮ್ಯದ ಹೊರತಾಗಿಯೂ ಅವರು ಬೆರ್ಹಮ್‌ಪುರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸುತ್ತಲೇ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಚೌಧರಿಯ ದಿಲ್ಲಿಯಲ್ಲಿರುವ ನಿವಾಸದಲ್ಲಿ ಸಂತೋಷ ಮರೆಯಾಗಿದೆ. ಒಂದು ವೇಳೆ ಅಧಿರ್ ಮುಂದಿನ ಚುನಾವಣೆಯಲ್ಲಿ ಬೆರ್ಹಮ್‌ಪುರ ಕ್ಷೇತ್ರದಿಂದ ಸ್ಪರ್ಧಿಸುವುದು ಬ್ಯಾನರ್ಜಿಗೆ ಬೇಡವಾದರೆ ಕಾಂಗ್ರೆಸ್ ಕೂಡಾ ಅವರನ್ನು ಬದಿಗೆ ಸರಿಸಬಹುದು. ಹಾಗಾಗಿ ಕೂಡಲೇ ಬಿಜೆಪಿಗೆ ಪಕ್ಷಾಂತರಗೊಳ್ಳಬೇಕು ಎಂಬುದು ಅಧಿರ್ ಬೆಂಬಲಿಗರ ವಾದ.

ತನ್ನ ಈಗಿನ ಪರಿಸ್ಥಿತಿ ಬಗ್ಗೆ ಚೌಧರಿಗೆ ಎಳ್ಳಷ್ಟೂ ಸಮಾಧಾನವಿಲ್ಲ. ಈಗಿರುವ ಪ್ರಶ್ನೆಯೆಂದರೆ, ಅವರು ಸಮಯವಿರುವಾಗಲೇ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆಯೇ ಎಂಬುದು. ರಾಜ್ಯದಲ್ಲಿ ಪಕ್ಷವು ತನ್ನ ಸ್ಥಾನವನ್ನು ಉತ್ತಮಪಡಿಸುತ್ತಿದ್ದು ಚೌಧರಿಗೆ ಒಳ್ಳೆಯ ಅವಕಾಶವಿದೆ. ಸದ್ಯ ಚೌಧರಿ ತುಟಿ ಬಿಚ್ಚುತ್ತಿಲ್ಲ. ಆದರೆೆ ಕಾಂಗ್ರೆಸ್ ತನ್ನ ಒಂದು ಗೆಲ್ಲುವ ಅಭ್ಯರ್ಥಿಯನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ ಅದರಿಂದ ಯಾರಿಗೂ ಆಶ್ಚರ್ಯವಾಗಲಿಕ್ಕಿಲ್ಲ.


ಏನು ಯೋಚಿಸುತ್ತಿದ್ದೀರಿ, ಮಾಯಾ?

ಆಕೆ ಮೈತ್ರಿ ಮಾಡಿಕೊಳ್ಳುತ್ತಾರೆಯೇ? ಇಲ್ಲವೇ? ಸದ್ಯದ ಸ್ಥಿತಿಯಲ್ಲಿ ಆಕೆ ಮಾಡುವುದಿಲ್ಲ ಎಂದೆನಿಸುತ್ತದೆ. ಚುನಾವಣೆಯ ಹೊಸ್ತಿಲಲ್ಲಿರುವ ಛತ್ತೀಸ್‌ಗಡದಲ್ಲಿ ಮಾಯಾವತಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿಲ್ಲ. ಅಜಿತ್ ಜೋಗಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಮಾಯಾವತಿ ನಿರ್ಧಾರ ಛತ್ತೀಸ್‌ಗಡ ಮತ್ತು ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ನ ಕನಸಿಗೆ ತಣ್ಣೀರೆರಚಿದೆ. ಎರಡೂ ಪಕ್ಷಗಳ ಮಧ್ಯೆ ಎಲ್ಲವೂ ಸರಿಯಿದೆ ಎಂದು ಬಿಎಸ್ಪಿಯ ಸತೀಶ್ ಮಿಶ್ರಾ ಭರವಸೆ ನೀಡಬಹುದು ಎಂದು ಕಾಂಗ್ರೆಸ್‌ನ ಕಮಲ್‌ನಾಥ್ ನಂಬಿದ್ದರು. ಕಾಂಗ್ರೆಸ್‌ನ ಮಿತ್ರಪಕ್ಷಗಳಾದ ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಕ್ಕೆ ಕೆಲವೊಂದು ಸ್ಥಾನಗಳನ್ನು ಬಿಡಲೂ ಕಮಲ್‌ನಾಥ್ ಯೋಚಿಸಿದ್ದರು.

ಈ ದೊಡ್ಡ ಮನಸ್ಸಿಗೂ ಒಂದು ಕಾರಣವಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ 55 ಸ್ಥಾನಗಳಲ್ಲಿ ಗೆಲುವಿನ ಅಂತರವು ಬಿಎಸ್ಪಿ, ಎಸ್ಪಿ ಮತ್ತು ಇತರ ಸಣ್ಣ ಪಕ್ಷಗಳು ಗಳಿಸಿದ ಮತಗಳಿಗಿಂತ ಕಡಿಮೆಯಾಗಿತ್ತು. ಹಾಗಾಗಿ ಈ ಬಾರಿ ಯಾವುದೇ ರೀತಿಯ ಚಾನ್ಸ್ ತೆಗೆದುಕೊಳ್ಳದಿರಲು ಕಮಲ್‌ನಾಥ್ ನಿರ್ಧರಿಸಿದ್ದರು. ಆದರೆ ಮಾಯಾವತಿ ಕೈಕೊಟ್ಟ ಪರಿಣಾಮ ಕಾಂಗ್ರೆಸ್‌ನ ಎಲ್ಲ ಲೆಕ್ಕಾಚಾರಗಳು ಬುಡಮೇಲಾಗಿದೆ. ಮಾಯಾವತಿಯ ನಿರ್ಧಾರವನ್ನು ವಿವರಿಸಲು ಪಿತೂರಿಯ ಹಲವು ವಾದಗಳನ್ನು ಹರಿಯಬಿಡಲಾಯಿತು. ಈ ನಡೆಯು, ಮುಂದೆ ನಡೆಯಲಿರುವ ವಿಧಾನಸಭಾ ಮತ್ತು ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಿಸುವ ಮಾಯಾವತಿಯ ವಿಧಾನವಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಕೆಲವರು, ಬಿಜೆಪಿ ಮತ್ತು ಮಾಯಾವತಿ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ಅದರಂತೆ ಈ ಮೈತ್ರಿ ನಡೆಸಲಾಗಿದೆ ಎಂದು ವಾದಿಸುತ್ತಾರೆ. ಅವುಗಳಲ್ಲಿ ಒಂದು ಆಮಿಷವೆಂದರೆ, ಕಾನ್ಶಿರಾಮ್ ಅವರಿಗೆ ಭಾರತ ರತ್ನ ನೀಡುವುದು.


ತಾರೆಯಂತೆ ಮಿನುಗಿದ ಚಂದ್ರಚೂಡ್

ಸರ್ವೋಚ್ಚ ನ್ಯಾಯಾಲಯದ ಪಾಲಿಗೆ ಈ ವಾರ ಅತ್ಯಂತ ಮಹತ್ವದ್ದಾಗಿತ್ತು. ಶುಕ್ರವಾರದ ನಿರ್ಧಾರದಲ್ಲಿ ಶ್ರೇಷ್ಠ ನ್ಯಾಯಾಲಯ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪುಣೆ ಪೊಲೀಸರು ಹೋರಾಟಗಾರರನ್ನು ಬಂಧಿಸಿರುವ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ ಮತ್ತು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಬೇಕೆಂಬ ಆಗ್ರಹವನ್ನು ತಳ್ಳಿಹಾಕಿದೆ. ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠ ನೀಡಿದ 2:1 ತೀರ್ಪಿನಲ್ಲಿ ಹೋರಾಟಗಾರರನ್ನು ತಕ್ಷಣ ಬಂಧಮುಕ್ತಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.

ನ್ಯಾಯಾಧೀಶರಾದ ದೀಪಕ್ ಮಿಶ್ರಾ ಮತ್ತು ಎ.ಎಂ.ಖನ್ವಿಲ್ಕರ್ ಪೊಲೀಸರ ಪರವಾಗಿ ತೀರ್ಪು ನೀಡಿದರೆ, ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಈ ಇಬ್ಬರು ನ್ಯಾಯಾಧೀಶರ ತೀರ್ಪನ್ನು ವಿರೋಧಿಸಿದ್ದಾರೆ. ಕಳೆದ ವಾರ ಚಂದ್ರಚೂಡ್ ಏಕಾಏಕಿಯಾಗಿ ಪ್ರಗತಿಪರರ ನಾಯಕನಾಗಿ ಹೊರಹೊಮ್ಮಿದ್ದಾರೆ. ಭೀಮಾ ಕೋರೆಗಾಂವ್ ಪ್ರಕರಣದ ಹಿಂದಿನ ವಿಚಾರಣೆಯ ವೇಳೆ ಹಿರಿಯ ವಕೀಲರೊಬ್ಬರು ನ್ಯಾಯಾಲಯವು ಇಂಥದ್ದೇ ತೀರ್ಪು ನೀಡುತ್ತದೆ ಎಂದು ನಿಖರವಾಗಿ ತಿಳಿಸಿದ್ದರು. ಕಾಂಗ್ರೆಸ್‌ನ ನ್ಯಾಯತಂಡದ ಮುಖ್ಯಸ್ಥ ಮತ್ತು ಹೋರಾಟಗಾರರ ಪರ ವಾದಿಸುತ್ತಿದ್ದ ವಕೀಲರಲ್ಲಿ ಒಬ್ಬರು, ಚಂದ್ರಚೂಡ್ ನಮ್ಮ ನಿಲುವನ್ನು ಸಮರ್ಥಿಸಲಿದ್ದಾರೆ. ಆದರೆ ಇತರ ಇಬ್ಬರು ನ್ಯಾಯಾಧೀಶರು ವಿರುದ್ಧ ತೀರ್ಪನ್ನು ನೀಡಬಹುದು ಎಂದು ತಿಳಿಸಿದ್ದರು. ಒಂದಂತೂ ಸತ್ಯ, ನ್ಯಾಯಾಧೀಶ ಚಂದ್ರಚೂಡ್ ಪ್ರಗತಿಪರರಿಗೆ ಹೊಸ ಮಿನುಗುತಾರೆಯಾಗಿ ಗೋಚರಿಸಿದ್ದಾರೆ.


ಅಮರ್ ಸಿಂಗ್ ಅವರ ಹೊಸ ಅವತಾರ
ಅಮರ್ ಸಿಂಗ್ ಎಲ್ಲರ ಸ್ನೇಹಿತ ಎಂದೇ ಪ್ರಸಿದ್ಧ. ಆದರೆ ಈಗ ನರೇಂದ್ರ ಮೋದಿಗೂ ಮೆಚ್ಚಿನ ವ್ಯಕ್ತಿಯಾಗಿರುವ ಅವರು ಒಂದು ಯೋಜನೆಯಲ್ಲಿದ್ದಾರೆ. ಅವರು ಮುಂದಿನ ತಿಂಗಳು ದಿಲ್ಲಿಯಿಂದ ಲಕ್ನೊಗೆ ಅಝಮ್ ಖಾನ್ ಎಫ್‌ಐಆರ್ ಯಾತ್ರೆ ಕೈಗೊಳ್ಳಲಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಝಮ್ ಖಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲು ದೂರು ನೀಡುವುದು ಈ ಯಾತ್ರೆಯ ಉದ್ದೇಶ.

ಅಮರ್ ಸಿಂಗ್ ಮತ್ತು ಅವರ ಆಪ್ತೆ ನಟಿ ಜಯಪ್ರದಾ ಸಮಾಜವಾದಿ ಪಕ್ಷದಲ್ಲಿರುವಾಗ ಖಾನ್ ಜೊತೆಗಿನ ಇವರಿಬ್ಬರ ಸಂಬಂಧ ಹಳಸಿತ್ತು. ಎಸ್ಪಿ ಮತ್ತು ಖಾನ್ ಪ್ರಾಬಲ್ಯ ಹೊಂದಿರುವ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಲು ಸಿಂಗ್ ಮುಂದಾಗಿದ್ದಾರೆ. ತನ್ನ ಹಿಂದಿನ ಪಕ್ಷಕ್ಕೆ ನಷ್ಟವುಂಟು ಮಾಡುವುದು ಸಿಂಗ್ ಯಾತ್ರೆಯ ಉದ್ದೇಶ. ಎಸ್ಪಿಯ ಕೆಲವು ನಾಯಕರಂತೂ, ರಾಜ್ಯದಲ್ಲಿ ಪಕ್ಷಕ್ಕೆ ಹಾನಿ ಮಾಡಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೇ ಅಮರ್ ಸಿಂಗ್‌ರನ್ನು ಯಾತ್ರೆ ಕೈಗೊಳ್ಳುವಂತೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಸಿಂಗ್ ಯಾತ್ರೆಗೆ ‘ಯುವ ಹಿಂದೂ ಭಾರತ್’ ಎಂಬ ಸಂಘಟನೆ ಬೆಂಬಲ ಘೋಷಿಸಿದೆ. ಈ ಸಂಘಟನೆ ಇತ್ತೀಚಿನವರೆಗೆ ಸುದ್ದಿಯಲ್ಲಿರಲಿಲ್ಲ. ಯಾತ್ರೆ ಆರಂಭವಾದ ನಂತರ ಸಿಂಗ್ ಏನು ಹೇಳುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಷ್ಟೇ.


ಮಾಧ್ಯಮದ ಹಿಡಿತ ಕಳೆದುಕೊಳ್ಳುತ್ತಿರುವ ಜೇಟ್ಲಿ
ಕೆಲವು ಪತ್ರಕರ್ತರು ಅರುಣ್ ಜೇಟ್ಲಿಯನ್ನು ಬ್ಯೂರೊ ಚೀಫ್ ಎಂದು ಅಣಕಿಸುವುದು ಸುಮ್ಮನೆಯಲ್ಲ. ರಾಜಧಾನಿಯಲ್ಲಿ ಪ್ರಕಟವಾಗುವ ಅನೇಕ ಸುದ್ದಿ ಪತ್ರಿಕೆಗಳು ಮುದ್ರಣಕ್ಕೂ ಮುನ್ನ ತಮ್ಮ ಮುಖಪುಟವನ್ನು ಜೇಟ್ಲಿಯ ಅನುಮತಿ ಪಡೆಯಲು ಕಳುಹಿಸುತ್ತವೆ ಎಂದೂ ಕೆಲವರು ಹೇಳುತ್ತಾರೆ. ಖಂಡಿತವಾಗಿಯೂ ಇದು ಉತ್ಪ್ರೇಕ್ಷೆಯಾಗಿರಲೂ ಬಹುದು. ಆದರೆ ಜೇಟ್ಲಿ ಮಾಧ್ಯಮಗಳನ್ನು ಎಷ್ಟು ಸೂಕ್ತವಾಗಿ ನಿಭಾಯಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಈಗ ಎದ್ದಿರುವ ಪ್ರಶ್ನೆಯೆಂದರೆ ಈ ಹಿಡಿತ ಈಗಲೂ ಅಷ್ಟೇ ಗಟ್ಟಿಯಾಗಿದೆಯೇ ಎಂಬುದು?.

ಕೆಲದಿನಗಳ ಹಿಂದೆ ಜೇಟ್ಲಿಯ ಬ್ಲಾಗ್ ಲೇಖನಗಳು ಅವರು ಬಯಸಿದಷ್ಟು ಆಕರ್ಷಣೆಯನ್ನು ಪಡೆಯಲಿಲ್ಲ ಮತ್ತು ಇತ್ತೀಚೆಗೆ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮಾರಂಭದಲ್ಲಿ ಮಾಧ್ಯಮಗಳು ಮೋಹನ್ ಭಾಗವತ್ ಆಡಿದ ಪ್ರತಿಯೊಂದು ಶಬ್ದಗಳ ಮೇಲೆ ಗಮನಹರಿಸಿದ್ದವೇ ಹೊರತು ಬ್ಯಾಂಕಿಂಗ್ ಸುಧಾರಣೆ ಕುರಿತು ಜೇಟ್ಲಿ ನಡೆಸಿದ ನೇರ ಸಂವಾದದ ಮೇಲಲ್ಲ. ಸ್ಪಷ್ಟವಾಗಿಯೂ, ಜೇಟ್ಲಿ ರಾಜಧಾನಿಯ ಮಾಧ್ಯಮಗಳ ಅಚ್ಚಮೆಚ್ಚಾಗಿ ಉಳಿದಿಲ್ಲ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News