ಆಧಾರ್ ದೃಢೀಕರಣ ನಿಲ್ಲಿಸಲು ಕ್ರಿಯಾಯೋಜನೆ: 15 ದಿನಗಳಲ್ಲಿ ಸಲ್ಲಿಸಲು ಟೆಲಿಕಾಂ ಕಂಪನಿಗಳಿಗೆ ನಿರ್ದೇಶ

Update: 2018-10-01 15:23 GMT

ಹೊಸದಿಲ್ಲಿ,ಅ.1: ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಗ್ರಾಹಕರ ದೃಢೀಕರಣಕ್ಕಾಗಿ ಆಧಾರ್ ಸಂಖ್ಯೆಯ ಬಳಕೆಯನ್ನು ನಿಲ್ಲಿಸಲು ಕೈಗೊಳ್ಳಲಾಗುವ ಕ್ರಿಯಾಯೋಜನೆ/ನಿರ್ಗಮನ ಯೋಜನೆಯ ವಿವರಗಳನ್ನು ಸಲ್ಲಿಸಲು ಟಿಲಿಕಾಂ ಕಂಪನಿಗಳಿಗೆ 15 ದಿನಗಳ ಕಾಲಾವಕಾಶವನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯವು ಸೆ.26ರ ತನ್ನ ತೀರ್ಪಿನಲ್ಲಿ ಮೊಬೈಲ್ ಫೋನ್ ಸಂಪರ್ಕಗಳು ಮತ್ತು ಇತರ ಹಲವಾರು ಸೇವೆಗಳಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸುವ ಪ್ರಯತ್ನಗಳಿಗೆ ಇತಿಶ್ರೀ ಹಾಡಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಈ ನಿರ್ದೇಶ ಹೊರಬಿದ್ದಿದೆ.

ಭಾರ್ತಿ ಏರ್‌ಟೆಲ್,ರಿಲಯನ್ಸ್ ಜಿಯೊ,ವೊಡಾಫೋನ್ ಐಡಿಯಾ ಇತ್ಯಾದಿ ಟೆಲಿಕಾಂ ಸೇವೆ ಪೂರೈಕೆದಾರ(ಟಿಎಸ್‌ಪಿ) ಕಂಪನಿಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದ್ದು,ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪಾಲಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶ ನೀಡಲಾಗಿದೆ. ಆಧಾರ್ ಆಧರಿತ ದೃಢೀಕರಣ ವ್ಯವಸ್ಥೆಯ ಬಳಕೆಯನ್ನು ಸ್ಥಗಿತಗೊಳಿಸಲು ತಮ್ಮ ಯೋಜನೆಯನ್ನು ಪ್ರಾಧಿಕಾರಕ್ಕೆ 2018, ಅ.15ರೊಳಗೆ ಸಲ್ಲಿಸುವಂತೆ ಅವುಗಳಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News