​ವಿಮಾನ ಹೈಜಾಕ್ ಪ್ರಹಸನ: ವಾಸ್ತವವಾಗಿ ನಡೆದದ್ದೇನು ಗೊತ್ತೇ ?

Update: 2018-10-02 03:56 GMT

ಜೋಧಪುರ, ಅ. 2: ಮೈಸೂರಿನಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕನ ಪತ್ತೆಗೆ ಮುಂಬೈ- ಜೋಧಪುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸರನ್ನು ಭಯೋತ್ಪಾದಕರೆಂದು ಬಿಂಬಿಸಿ, ವಿಮಾನ ಅಪಹರಿಸಲಾಗುತ್ತಿದೆ ಎಂಬ ಭೀತಿ ಹುಟ್ಟಿಸಿದ ನಿರುದ್ಯೋಗಿ ಯುವಕನೊಬ್ಬ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ.

ಏರ್ ಇಂಡಿಯಾ ವಿಮಾನ 645ರಲ್ಲಿ ಪ್ರಯಾಣಿಕನೊಬ್ಬ ಸಿಬ್ಬಂದಿಗೆ ನಾಲ್ಕು ಪ್ರಯಾಣಿಕರ ಸಂದೇಹಾಸ್ಪದ ನಡವಳಿಕೆ ಬಗ್ಗೆ ಮಾಹಿತಿ ನೀಡಿ, ಅವರು ಭಯೋತ್ಪಾದಕರಿರಬೇಕು ಎಂದು ಹೇಳಿದ. ತಕ್ಷಣ ವಿಮಾನದ ಸಿಬ್ಬಂದಿ ಪೈಲಟ್‌ಗೆ ಈ ಸಂದೇಶ ರವಾನಿಸಿದರು. ವಾಯು ಸಂಚಾರ ನಿಯಂತ್ರಕರಿಗೆ ಈ ಬಗ್ಗೆ ಮಾಹಿತಿ ನೀಡಿದ ಪೈಲಟ್, ವಿಮಾನ ಇಳಿಯುವ ವೇಳೆಗೆ ಭದ್ರತಾ ವ್ಯವಸ್ಥೆ ಮಾಡುವಂತೆ ಕೋರಿದರು.

ವಿಮಾನ ಇಳಿಯುತ್ತಿದ್ದಂತೆ ಸಿಐಎಸ್‌ಎಫ್ ಸಿಬ್ಬಂದಿ ವಿಮಾನವನ್ನು ಪ್ರವೇಶಿಸಿ ಕೆಲ ಪ್ರಯಾಣಿಕರನ್ನು ವಶಕ್ಕೆ ಪಡೆದರು. ನಾಲ್ವರು ಶಂಕಿತರನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಆದರೆ ಒಂದು ಗಂಟೆಯಲ್ಲಿ ಇಡೀ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡು ದೂರು ನೀಡಿದ ವ್ಯಕ್ತಿಯೇ ಆರೋಪಿಯಾದ.

"ಎಚ್ಚರಿಕೆ ಗಂಟೆ ಮೊಳಗಿದ ವ್ಯಕ್ತಿ ಹೈದರಾಬಾದ್ ಮೂಲದ ನಿರುದ್ಯೋಗಿ ಯುವಕ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ. ಮೈಸೂರಿನ 15 ವರ್ಷದ ಬಾಲಕ ನಾಪತ್ತೆಯಾಗಿರುವ ಬಗ್ಗೆ ಭಿತ್ತಿಚಿತ್ರವನ್ನು ನೋಡಿದ್ದ ಈತ ಬಾಲಕನ ಪೋಷಕರಿಗೆ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ನಾಪತ್ತೆಯಾದ ಬಾಲಕ ಜೋಧ್‌ಪುರ ಆಶ್ರಮದಲ್ಲಿ ಇದ್ದಾನೆ. ಅಲ್ಲಿಗೆ ತೆರಳಲು ನಾನು ನೆರವು ನೀಡಬಲ್ಲೆ ಎಂದು ಭರವಸೆ ನೀಡಿದ್ದಾನೆ" ಎಂದು ಡಿಸಿಪಿ ಅಮನ್‌ದೀಪ್ ಸಿಂಗ್ ಕಪೂರ್ ವಿವರಿಸಿದ್ದಾರೆ.

ಯುವಕ ನೀಡಿದ ಮಾಹಿತಿ ಸರಿ ಇರಬೇಕು ಅಂದುಕೊಂಡ ಮೈಸೂರು ಪೊಲೀಸ್ ಠಾಣೆಯ ಒಬ್ಬ ಮುಖ್ಯಪೇದೆ ಮತ್ತು ಪೇದೆ, ಬಾಲಕನ ಪೋಷಕರ ಜತೆಗೆ ಸೋಮವಾರ ಮುಂಜಾನೆ ಜೋಧ್‌ಪುರಕ್ಕೆ ಹೊರಟಿದ್ದರು. ಯುವಕನೂ ಇವರ ಜತೆಗಿದ್ದ. ಸುಳ್ಳುದಾಖಲೆ ನೀಡಿ ಈ ಯುವಕ ಬೋರ್ಡಿಂಗ್‌ ಪಾಸ್ ಪಡೆದಿದ್ದ.
ಪೊಲೀಸ್ ಸಿಬ್ಬಂದಿ, ಬಾಲಕನ ಪೋಷಕರ ಜತೆಗಿರುವ ವಿಚಾರ ಈ ಯುವಕನಿಗೆ ತಿಳಿದಿರಲಿಲ್ಲ. ಜೋಧ್‌ಪುರದಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಬಾಲಕನ ಪೋಷಕರಿಂದ ಹಣ ಪಡೆದು ಪಲಾಯನ ಮಾಡುವ ಯೋಜನೆಯನ್ನು ಯುವಕ ಹಾಕಿದ್ದ ಎಂದು ಸಿಐಎಸ್‌ಎಫ್ ಸಿಬ್ಬಂದಿ ವಿವರಿಸಿದ್ದಾರೆ.

ನಾಲ್ವರನ್ನು ವಿಚಾರಣೆಗೆ ಗುರಿಪಡಿಸಿದಾಗ, ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಮತ್ತಿಬ್ಬರು ಬಾಲಕನ ಪೋಷಕರು ಎನ್ನುವುದು ದೃಢಪಟ್ಟಿದೆ. ಜೋಧ್‌ಪುರಕ್ಕೆ ಸೋಮವಾರ ಬೆಳಗ್ಗೆ 11.15ಕ್ಕೆ ವಿಮಾನ ತಲುಪಿದೆ. ಈ ಪ್ರಹಸನದಿಂದಾಗಿ ವಿಮಾನ ವಾಪಾಸು ಹೊರಡುವುದು ವಿಳಂಬವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News