ಶಬರಿಮಲೆ ತೀರ್ಪು ಮರುಪರಿಶೀಲನೆ ಅರ್ಜಿ ಸಲ್ಲಿಸುವುದಿಲ್ಲ: ಪಿಣರಾಯಿ ವಿಜಯನ್

Update: 2018-10-03 14:22 GMT

ತಿರುವನಂತಪುರಂ, ಅ.3: ಶಬರಿಮಲೆ ದೇವಸ್ಥಾನವನ್ನು ಎಲ್ಲಾ ವಯೋಮಿತಿಯ ಮಹಿಳೆಯರೂ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಮರುಪರಿಶೀಲನೆ ಕೋರಿ ರಾಜ್ಯ ಸರಕಾರ ಅರ್ಜಿ ಸಲ್ಲಿಸುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಕಾನೂನಿಗೆ ಬದ್ಧರಾಗಿರುವ ಸಮಾಜ ನಮ್ಮದಾಗಿದ್ದು ಸುಪ್ರೀಂಕೋರ್ಟ್‌ನ ಆದೇಶವನ್ನು ನಾವು ಪಾಲಿಸಬೇಕಿದೆ . ಇದೀಗ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಮಹಿಳೆಯರಿಗೆ ಭದ್ರತೆಯನ್ನು ರಾಜ್ಯ ಸರಕಾರ ಖಾತರಿಪಡಿಸುತ್ತದೆ. ಕೇರಳ ಹಾಗೂ ನೆರೆ ರಾಜ್ಯಗಳ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುವುದು. ಶಬರಿಮಲೆ ದೇವಸ್ಥಾನಕ್ಕೆ ಹೋಗಬಯಸುವ ಮಹಿಳೆಯರನ್ನು ಯಾರೂ ತಡೆಯಲಾಗದು ಎಂದು ತಿರುವನಂತಪುರಂನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಸುಪ್ರೀಂ ತೀರ್ಪನ್ನು ಖಂಡಿಸಿ ರಾಜ್ಯದಲ್ಲಿ ನಡೆದ ಪ್ರತಿಭಟನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ತೀರ್ಪನ್ನು ಸ್ವಾಗತಿಸಿದವರೂ ಸಾಕಷ್ಟು ಮಂದಿಯಿದ್ದಾರೆ. ಟಿಕೆಎ ನಾಯರ್ ಸೇರಿದಂತೆ ಹಲವು ಸಂತರು ತೀರ್ಪನ್ನು ಸ್ವಾಗತಿಸಿದ್ದಾರೆ ಎಂದರು.

ಶಬರಿಮಲೆ ದೇವಸ್ಥಾನದ ಆಡಳಿತವನ್ನು ನಿರ್ವಹಿಸುವ ಟಿಡಿಬಿ ಕೂಡಾ ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸದಿರಲು ನಿರ್ಧರಿಸಿದೆ ಎಂದು ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ. ಮಂಗಳವಾರ ಬಹುತೇಕ ಮಹಿಳೆಯರೇ ಒಳಗೊಂಡಿದ್ದ ಸಾವಿರಾರು ಜನ ಪಂದಳಂ ನಗರದ ರಸ್ತೆಗಳಲ್ಲಿ ಸುಪ್ರೀಂಕೋರ್ಟ್‌ನ ತೀರ್ಪನ್ನು ವಿರೋಧಿಸಿ ಪ್ರತಿಭಟನಾ ಜಾಥಾ ನಡೆಸಿದರು. ಪಂದಳಂನ ರಾಜಮನೆತನದ ಕರೆಯನ್ವಯ ಈ ಪ್ರತಿಭಟನೆ ನಡೆಸಲಾಯಿತು.

ಈ ಮಧ್ಯೆ, ಶಬರಿಮಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್‌ನ ಕೇಂದ್ರ ನಾಯಕರು ತಿಳಿಸಿದ್ದಾರೆ. ಆದರೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗಮನಿಸಿ ಪ್ರತಿಕ್ರಿಯೆ ನೀಡಲು ಪಕ್ಷದ ರಾಜ್ಯ ಘಟಕಕ್ಕೆ ಸಂಪೂರ್ಣ ಸ್ವಾತಂತ್ರವಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News