ನ್ಯಾಯಾಧೀಶರೊಳಗಿನ ಮನಸ್ತಾಪ ಕೊನೆಗೊಳ್ಳಲಿ ಸಿಜೆಐ ಗೊಗೋಯ್ ಗೆ ನ್ಯಾ. ಸಂತೋಷ್ ಹೆಗ್ಡೆ ಸಲಹೆ
ಹೈದರಾಬಾದ್, ಅ.3: ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದಲ್ಲದೆ ನ್ಯಾಯಾಧೀಶರೊಳಗಿನ ತಪ್ಪು ತಿಳುವಳಿಕೆ ಕೊನೆಗೊಳಿಸಲು ಪ್ರಯತ್ನಿಸಬೇಕು ಎಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸಂತೋಷ್ ಹೆಗ್ಡೆ ನೂತನ ಸಿಜೆಐ ರಂಜನ್ ಗೊಗೋಯ್‌ಗೆ ಸಲಹೆ ನೀಡಿದ್ದಾರೆ. ನ್ಯಾಯ ತೀರ್ಮಾನದ ವಿಷಯ ಬಂದಾಗ ಎಲ್ಲಾ ನ್ಯಾಯಾಧೀಶರೂ ಒಂದಾಗುತ್ತಾರೆ ಎಂಬ ಭಾವನೆಯನ್ನು ಸಿಜೆಐ ಜನರ ಮನದಲ್ಲಿ ಮೂಡಿಸಬೇಕು ಎಂದು ಮಾಜಿ ಸಾಲಿಸಿಟರ್ ಜನರಲ್ ಹೆಗ್ಡೆ ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಅಗಾಧ ಪ್ರಮಾಣದ ಪ್ರಕರಣಗಳು ಬಾಕಿಯಾಗಿದ್ದು ಇವನ್ನು ಕ್ಷಿಪ್ರವಾಗಿ ಇತ್ಯರ್ಥಗೊಳಿಸುವುದು ಗೊಗೋಯ್ ಅವರ ಪ್ರಥಮ ಜವಾಬ್ದಾರಿಯಾಗಿದೆ. ನ್ಯಾಯಾಲಯದ ವಿಚಾರಣೆಯನ್ನು ನೇರ ಪ್ರಸಾರಗೊಳಿಸುವ ವಿಷಯದ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ನಿರ್ಧರಿಸಿದೆ. ಈ ಹಿಂದಿನ ಸಿಜೆಐ ಅವಧಿಯಲ್ಲಿ ನ್ಯಾಯಾಧೀಶರೊಳಗಿನ ಮನಸ್ತಾಪ ಬೆಳಕಿಗೆ ಬಂದಿತ್ತು. ಇದು ಪುನರಾವರ್ತನೆಯಾಗ ಕೂಡದು. ಜನತೆ ನ್ಯಾಯಾಲಯದ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗಬಾರದು. ಸಹ ನ್ಯಾಯಾಧೀಶರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ವಿಚಾರಧಾರೆಗಳಿಗೆ ಕಿವಿಗೊಡಬೇಕು. ಆಗ ಸಿಜೆಐ ಬಗ್ಗೆ ಅವರಲ್ಲಿ ವಿಶ್ವಾಸ ಬೆಳೆಯುತ್ತದೆ ಎಂದು ಹೆಗ್ಡೆ ಹೇಳಿದರು.
ಬಹುಷಃ ಈ ಹಿಂದಿನ ಸಿಜೆಐ ಅವರ ಕಾರ್ಯಾವಧಿಯಲ್ಲಿ ಇಂತಹ ಪ್ರಕ್ರಿಯೆಯ ಕೊರತೆಯಿತ್ತು. ಆದ್ದರಿಂದ ನ್ಯಾಯಾಧೀಶರ ಮಧ್ಯೆ ಮನಸ್ತಾಪ, ತಪ್ಪುತಿಳುವಳಿಕೆ ಹುಟ್ಟಿಕೊಂಡಿತ್ತು. ಈ ಕುರಿತು ಗೊಗೋಯ್ ಜಾಗೃತೆ ವಹಿಸಬೇಕು ಎಂದ ಅವರು, ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಕಾಲದಲ್ಲಿ ನೇಮಕಾತಿ ನಡೆದರೆ ನ್ಯಾಯನಿರ್ಣಯ ಪ್ರಕ್ರಿಯೆಗೆ ಅನುಕೂಲವಾಗುತ್ತದೆ ಎಂದರು.